ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರಲ್ಲೂ ದಿನೇ ದಿನೇ ಅಭಿವೃದ್ದಿ ಹೊಂದುತ್ತಿರುವ ತಾಂತ್ರಿಕ ಯುಗದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಪಡೆಯುವುದೇ ಒಂದು ಸಾಧನೆ. ವಿದೇಶಕ್ಕೆ ಹೋಗಿ ನೆಲೆಸಿ ದಶಕಗಳ ಕಾಲ ಕೆಲಸ ಮಾಡಿ ತಾಯ್ನಾಡಿಗೆ ಮರಳುವುದು ಸಣ್ಣ ಸಾಧನೆ ಏನಲ್ಲ. ವಲಸೆ ಹೋಗುವ ಪ್ರಕ್ರಿಯೆ ಇಂದು ನೆನ್ನೆಯದಲ್ಲ, ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿದೇಶಗಳಲ್ಲಿ ನಮ್ಮ ಲಕ್ಷಾಂತರ ಭಾರತೀಯರು ದುಡಿಯುತಿದ್ದಾರೆ. ಅಲ್ಲಿಯ ದುಡಿಮೆಯ ಜತೆಗೆ ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದು, ಇತರರನ್ನು ಬೆಳೆಸುವುದಲ್ಲದೆ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಬಹಳಷ್ಟು ಜನರು ಇದ್ದಾರೆ.
ಈ ಬೆಳವಣಿಗೆಯಲ್ಲಿ, ಶೂನ್ಯದಿಂದ ಸಾಧಿಸಿ ಯಶಸ್ಸು ಗಳಿಸಿದ್ದಲ್ಲದೆ, ಸಮಾಜ ಸಮುದಾಯಕ್ಕಾಗಿ ಕೊಡುಗೆ ನೀಡಿದವರು ಇಲ್ಲಿ ಬಹಳ ಮುಖ್ಯರಾಗುತ್ತಾರೆ. ಕೆಲವರು ತೆರೆಮರೆಯಲ್ಲಿಯೇ ಕೆಲಸ ಮಾಡುತಿದ್ದು, ಇನ್ನು ಕೆಲವರು ಮುಖ್ಯವಾಹಿನಿಯಲ್ಲಿ ಜನರೊಂದಿಗೆ ಬೆರೆತು ಜನರ ಆಶಯಗಳಿಗೆ ಸ್ಪಂದಿಸುತಿದ್ದಾರೆ. ಒಮಾನಿನಲ್ಲಿ ಇಂತಹ ಹಲವಾರು ಕನ್ನಡಿಗ ಸಾಧಕರಿದ್ದಾರೆ, ಸಮಾಜ ಸೇವಕರಿದ್ದಾರೆ. ಸಂಸ್ಥೆಗಳನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿದವರಿದ್ದಾರೆ. ಒಬ್ಬ ಸಾಮಾನ್ಯ ಉದ್ಯೋಗಿಯಾಗಿದ್ದುಕೊಂಡು ಸಂಸ್ಥೆಯ ಉನ್ನತ ಮಟ್ಟದ ಹುದ್ದೆಗೆ ಏರಿದವರು ಇದ್ದಾರೆ. ಹೀಗೆ ಇವರೆಲ್ಲರೂ ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲವರು. ಅವರ ಕಾರ್ಯಗಳು ಬೇರೆಯವರಿಗೆ ಪ್ರೇರಣೆಯಾಗುವುದರಲ್ಲಿ ಸಂಶಯವೇ ಇಲ್ಲ.
ಸಮುದಾಯದ ಅಭ್ಯುದಯಕ್ಕಾಗಿ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಇವರ ಕಾರ್ಯ ಮತ್ತಷ್ಟು ಜನರಿಗೆ ಪ್ರೇರೇಪಣೆ ನೀಡಿ, ಮುಂದಿನ ಪೀಳಿಗೆಯ ಜನಕ್ಕೆ ಇವರು ಮಾದರಿಯಾಗಲಿ ಎನ್ನುವ ಉದ್ದೇಶದಿಂದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಮಾನ್ ಕನ್ನಡಿಗ ಗಣ್ಯರಿಗೆ "ಒಮಾನ್ ಕನ್ನಡಿಗರ ವೇದಿಕೆಯು" ಇತ್ತೀಚೆಗೆ ನಡೆದ ಓಂಕಾರ ಸಮಿತಿಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವೀರೇಶಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.
ಶ್ರೀ ಜಿ.ವಿ.ರಾಮಕೃಷ್ಣ: ಮಸ್ಕತ್ ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ "ಶ್ರೀ ಜಿ.ವಿ.ರಾಮಕೃಷ್ಣ" ರವರು ಒಮಾನಿನ ಬ್ಯಾಂಕಿಂಗ್ ವಲಯದಲ್ಲಿ ಚಿರಪರಿಚಿತರು. ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಸಮಯದಿಂದ ಒಮಾನ್ ರಾಷ್ಟ್ರದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ದೋಫಾರ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತಿದ್ದಾರೆ.
ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನ ನಡೆಸಿ ಅದರಲ್ಲಿ ಸಫಲತೆ ಕಂಡು ಮತ್ತು ಹಲವಾರು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿ ಬ್ಯಾಂಕ್ ಗಳ ಲಾಭವನ್ನು ಮತ್ತು ಗ್ರಾಹಕರ ಸಂಖ್ಯೆಯನ್ನೂ ದ್ವಿಗುಣ ಗೊಳಿಸುವುದರಲ್ಲಿ ಇವರ ಶ್ರಮವೂ ಮಹತ್ತರವಾಗಿದೆ. ಇವರ ಉನ್ನತ ವಿದ್ಯಾರ್ಹತೆ ಮತ್ತು ಅಪಾರವಾದ ಅನುಭವವನ್ನು ಗುರುತಿಸಿ ನಿಝ್ವಾ ಯೂನಿವರ್ಸಿಟಿಯ (ನಿಝ್ವಾ ವಿಶ್ವವಿದ್ಯಾಲಯ) ಬೋರ್ಡ್ ನಲ್ಲಿ ಇವರಿಗೆ ಸದಸ್ಯತ್ವವನ್ನು ನೀಡಿದ್ದಾರೆ. ಇಂತಹ ಉನ್ನತವಾದ ಸ್ಥಾನವನ್ನು ಪಡೆದ ಮೊದಲ ಒಮಾನ್ ಕನ್ನಡಿಗ ಇವರಾಗಿದ್ದಾರೆ.
ಒಮಾನಿನ ಕನ್ನಡ ಸಮುದಾಯದ ಹಲವಾರು ಕಾರ್ಯಕ್ರಮಗಳಿಗೆ ಇವರು ಕಾರ್ಯ ನಿರ್ವಹಿಸುತಿದ್ದ ಬ್ಯಾಂಕ್ ಗಳಿಂದ ಪ್ರಾಯೋಜಕತ್ವ ನೀಡಿದ್ದಲ್ಲದೆ ತಮ್ಮ ಸ್ವಂತ ಸಂಪಾದನೆಯ ಹಣವನ್ನು ಸಹ ಆಧ್ಯಾತ್ಮಿಕ ಮತ್ತು ಸಮಾಜ ಸೇವೆಯ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ. ಬಹಳಷ್ಟು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು, ಕಾರ್ಯಕ್ರಮಗಳ ಆಯೋಜಕರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾರೆ. ಇಂತಹ ಅಪರಿಮಿತ ಸಹಕಾರದಿಂದ ಕರ್ನಾಟಕ ಮೂಲದ ಸಾಂಸ್ಕೃತಿಕ ಸಂಘ ಸಂಸ್ಥೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತ ಬಂದಿವೆ. ಹಿರಿಯರು ಕಿರಿಯರು ಎನ್ನದೆ, ಎಲ್ಲರೊಂದಿಗೆ ಆತ್ಮಿಯವಾಗಿ ಬೆರೆತು ಕಷ್ಟ ಸುಖ ವಿಚಾರಿಸುವ ಇವರದು ಬಹಳ ದೊಡ್ಡಗುಣ.
ಶ್ರೀಮತಿ ಕವಿತಾ ರಾಮಕೃಷ್ಣ: ಶ್ರೀ ಜಿ.ವಿ.ರಾಮಕೃಷ್ಣ ರವರ ಧರ್ಮಪತ್ನಿಯವರಾದ ಶ್ರೀಮತಿ ಕವಿತಾ ರಾಮಕೃಷ್ಣ ರವರು ಅಪ್ರತಿಮ ಸಾಧಕರು. ಇವರು ತಂಜಾವೂರು ಶೈಲಿಯ ಚಿತ್ರಕಲೆ ರಚಿಸುವುದರಲ್ಲಿ ನಿಪುಣರು. ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ವಿಜೇತರು, ಮಸ್ಕತ್ ನಲ್ಲಿ ಯೋಗ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಇವರು ಬಹಳ ಹೆಸರುವಾಸಿ. ಇವರು ಸಂಸ್ಕೃತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ,
ಯೋಗ ಸಾಧನೆ ಮತ್ತು ಸಮಾಜ ಸೇವೆಗೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿಲಾಗಿದೆ. ಕೋವಿಡ್‌ಸಾಂಕ್ರಾಮಿಕದ ಸಂದರ್ಭದಲ್ಲಿ ಸೂರ‍್ಯ ನಮಸ್ಕಾರ ಮತ್ತು ವಿವಿಧ ಯೋಗಾಸನದ ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆಂದು ಸಾರುತ್ತಾ ಒಮಾನ್ ರಾಜವಂಶಸ್ಥರೂ ಸೇರಿದಂತೆ ಹಲವರಿಗೆ ಕವಿತಾ ಯೋಗ ಕಲಿಸಿಕೊಟ್ಟ ಹೆಗ್ಗಳಿಕೆ ಇವರಿಗೆ ಇದೆ.
ಪ್ರಶಸ್ತಿಗಳು: ವಿದೇಶದಲ್ಲಿ ನೆಲೆಸಿ, ಸಂಸ್ಕೃತ ಭಾಷೆಯ ಏಳ್ಗೆ, ಕಲೆ, ಯೋಗ ಮತ್ತು ಧ್ಯಾನದ ಅಭಿವೃದ್ಧಿಗಾಗಿ ಶ್ರಮಿಸಿರುವ ಇವರ ಸಾಧನೆಯನ್ನ ಗುರುತಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2018ರಲ್ಲಿ ಪ್ರತಿಷ್ಟಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಒಮಾನ್ ನಲ್ಲಿ ಅಲ್ಮಾರಾ ಶ್ರೇಷ್ಠ ಪ್ರಶಸ್ತಿ 2018, ಒಮಾನ್ ವರ್ಷದ ಮಹಿಳೆ ಪ್ರಶಸ್ತಿ 2019 ಹಾಗೂ 2023 ರ ಏಷ್ಯಾದ ಅತ್ಯಂತ ಸ್ಪೂರ್ತಿದಾಯಕ ಐಕಾನ್ ಪ್ರಶಸ್ತಿ ಇವರಿಗೆ ಲಭಿಸಿದೆ. ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಕವಿತಾರವರು ಸಂಸ್ಕೃತ, ಯೋಗ ಚಿತ್ರಕಲೆ ಮಾತ್ರವಲ್ಲದೆ, ಸಾಹಿತ್ಯದಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಒಮಾನ್ ನ ಪ್ರೀತಿ ಬಂಧಕ್ಕೆ ಮನಸೋತು ಕನ್ನಡದಲ್ಲಿ ಮಸ್ಕತ್ ಬಗ್ಗೆ 'ನಾ ಕಂಡ ಮಸ್ಕಟ್' ಎನ್ನುವ ಪುಸ್ತಕ ಬರೆದಿದ್ದಾರೆ. ಒಮಾನ್ ನ ದಿನಪತ್ರಿಕೆಗಳಲ್ಲದೆ, ಕರ್ನಾಟಕದ ವಿಶ್ವವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಲೇಖನಗಳನ್ನ ಬರೆದಿದ್ದಾರೆ.
"ಶ್ರೀ ಶಶಿಧರ್ ಶೆಟ್ಟಿ ಮಲ್ಲರ್": ಕರ್ನಾಟಕದ ಕರಾವಳಿ ಜಿಲ್ಲೆಯಾದ ಉಡುಪಿಯ ಕಾಪು ಗ್ರಾಮದವರು. ಮಸ್ಕತ್ ನಲ್ಲಿ ಕಳೆದ ನಾಲ್ಕು ದಶಕಗಳಿಂದ ನೆಲೆಸಿರುವ ಇವರು ಅಬೀರ್ ಗ್ರೂಪ್ ಆಫ್ ಕಂಪನಿಗಳ (Abeer Group of Companies) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಮಸ್ಕತ್ ನಲ್ಲಿ ನೆಲೆಸಿರುವ ಉಡುಪಿ ಮಂಗಳೂರು ಭಾಗದವರು ಇವರ ಹೆಸರನ್ನ ಕೇಳಿರದೇ ಇರಲಾರರು. ಅಷ್ಟರ ಮಟ್ಟಿಗೆ ಇವರು ಜನರಿಗೆ ಚಿರಪರಿಚಿತರು. ಅಂದಾಜು ನಾಲ್ಕು ದಶಕಗಳ ಕಾಲ ಒಮಾನಿ ನಲ್ಲಿ ನೆಲೆಸಿ ಇವರು ಮಾಡಿರುವ ಸಮಾಜ ಸೇವೆಗಳ ದೊಡ್ಡ ಪಟ್ಟಿಯೇ ಇದೆ. ಅದ್ಯಾವುದರ ಗುಟ್ಟು ಬಿಟ್ಟುಕೊಡದ ಇವರು, ವೃತ್ತಿ ಮತ್ತು ಸೇವೆಯನ್ನು ಸರಿದೂಗಿಸಿಕೊಂಡು ಹೋಗುತಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಿಂದ ಅವರನ್ನ ಬಲ್ಲ ಪ್ರತಿಯೊಬ್ಬರು ಅವರ ಕೆಲಸಕಾರ್ಯಗಳನ್ನ ಇಂದಿಗೂ ನೆನೆಯುತ್ತಾರೆ
ಕಷ್ಟದಲ್ಲಿರುವವರಿಗೆ ಹಲವಾರು ರೀತಿಯಲ್ಲಿ ನೆರವು ನೀಡಿದ್ದಾರೆ. ಊರಿನ ಬಡ ನಿರುದ್ಯೋಗಿಗಳಿಗೆ ತಮ್ಮ ಸಂಸ್ಥೆಗಳಲ್ಲಿ ಕೆಲಸ ನೀಡಿ ಅವರಿಗೆ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಊರಿನ ಮೂರು ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ದೇವಸ್ಥಾನಗಳ ಟ್ರಸ್ಟಿ ಯಾಗಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ಹಣವನ್ನ ದೇಣಿಗೆ ನೀಡಿದ್ದಾರೆ. ಮಸ್ಕತ್ ನ ಹಲವಾರು ಸಂಘ ಸಂಸ್ಥೆಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಒಮಾನ್ ನಲ್ಲಿ ಮೃತ ಪಟ್ಟವರ ದೇಹಗಳನ್ನ ಊರಿಗೆ ಕಳುಹಿಸುವುದು ಒಂಡು ದೊಡ್ಡ ಪ್ರಾಸೆಸ್. ಮೃತರ ದೇಹವನ್ನು ಹಿಂತಿರುಗಿಸಲು ಬೇಕಾದ ಡಾಕ್ಯುಮೆಂಟ್ ಗಳು, ಪೋಲೀಸ್ ಕ್ಲಿಯರೆನ್ಸ್ ಮತ್ತಿತರ ಕಾರ್ಯಗಳನ್ನ ನೆರವೇರಿಸಿದ್ದಾರೆ. ಅದಕ್ಕಾಗಿ ಒಂದು ತಂಡವನ್ನು ಕಟ್ಟಿದ್ದಾರೆ. ಒಮಾನ್ ನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಇಚ್ಚೆಪಟ್ಟವರಿಗೆ, ಈವರೆಗೆ ಸುಮಾರು 67 ಜನರ ಅಂತ್ಯಕ್ರಿಯೆಯನ್ನು ನೆರವೇರಿಸಲು ಶ್ರಮಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ ತಲೆದೋರಿದ ಸಂಧರ್ಭದಲ್ಲಿ, ದಹನ ಕ್ರಿಯೆ ನಡೆಸಲು ಸೌದೆಯ ಕೊರತೆ ಕಂಡು ಬಂದಾಗ, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಲ್ಲದೆ. ಮೃತ ದೇಹಗಳ ದಹನ ಮಾಡಲು ಎಲೆಕ್ಟ್ರಿಕ್ ಓವೆನ್ ಅನ್ನು ಸೋಹರ್ ನಲ್ಲಿ ಸ್ಥಾಪಿಸಿದ್ದಾರೆ.
"ಶ್ರೀ ಹಿರಿಯಣ್ಣ ನಾರಾಯಣ ಸ್ವಾಮಿ": ಅವರು ಮೂಲತಃ ಹಾಸನ ಜಿಲ್ಲೆಯ ಶ್ರವಣಬೆಳಗೊಳದವರು. ಬಡ ಶಾಲಾ ಶಿಕ್ಷಕರ ಪುತ್ರರಾದ ಇವರು ಇಂದು ಒಮಾನಿನ ಹೆಸರಾಂತ Al Maha Petroleum ಕಂಪನಿಯ Chief Financial Officer - CFO (ಮುಖ್ಯ ಹಣಕಾಸಿನ ಅಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಬಡತನದಲ್ಲಿ ಬೆಳೆದು ಶಿಕ್ಷಣವನ್ನು ಪಡೆದು ಇಂದು ಉನ್ನತ ಹುದ್ದೆ ಪಡೆಯುವ ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಕಡಿಮೆ ಸಾಧನೆ ಏನಲ್ಲ. ಕಳೆದ ಮೂರು ದಶಕಗಳಿಂದ ಒಮಾನಿನಲ್ಲಿ ಉದ್ಯೋಗ ಮಾಡುತಿದ್ದಾರೆ.
ತಾವು ಬೆಳೆಯುವುದರ ಜತೆಗೆ ಸದ್ದಿಲ್ಲದೆ ಸಮಾಜ ಮುಖಿ ಕೆಲಸಗಳನ್ನು ಮಾಡುತಿದ್ದಾರೆ, ಎಡಗೈ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವಂತೆ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಸ್ವಂತ ಹಣವನ್ನು ದೇಣಿಗೆಯನ್ನಾಗಿ ನೀಡುತಿದ್ದಾರೆ. ತಮ್ಮ ಕಂಪನಿಯ ಪ್ರಾಯೋಜಕತ್ವದ ಹಣವನ್ನು ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಗಳಿಗೆ ಕೊಡಿಸುವ ಕೆಲಸವನ್ನು ಮಾಡುತಿದ್ದಾರೆ.
ಕಲೆಯಲ್ಲಿ ಅಭಿರುಚಿಯನ್ನಿಟ್ಟುಕೊಂಡಿರುವ ಇವರು ನಾಟಕಗಳಿಗೆ ಕಥೆ, ಸಂಭಾಷಣೆ ಬರೆಯುವ ಮತ್ತು ನಿರ್ದೇಶಿಸುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಮಸ್ಕತ್ ನ ಕರ್ನಾಟಕ ಸಂಘದ ಸಾಂಸ್ಕೃತಿಕ ವೇದಿಕೆಯಲ್ಲಿ ಕೆಲವು ನಾಟಕಗಳನ್ನು ಪ್ರಸ್ತುತ ಪಡಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ಇವರು ಸಿದ್ದಹಸ್ತರು. ನಾಟಕ ಮಾಡೋಣ ಬನ್ನಿ ಎಂದು ಯಾರಾದರು ಕರೆದರೆ, ನಾನು ಸದಾಸಿದ್ದ ಎನ್ನುವ ಕ್ರಿಯಾಶೀಲ ವ್ಯಕ್ತಿತ್ವದವರು. ಇವರ ಬಳಿ ಹಲವಾರು ನಾಟಕದ ಕಥೆಗಳು ಇವೆ. ಆಸಕ್ತರು ಬಂದರೆ ಅವರಿಗೆ ನಾಟಕವನ್ನು ಕಲಿಸಿಕೊಡುವುದರಲ್ಲಿ ನಿಸ್ಸೀಮರು. ಹಿರಿಯಣ್ಣನವರದು ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವ ವ್ಯಕ್ತಿತ್ವದವರು.
"ಓಂಕಾರ ಸಮಿತಿಯ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್":
ಒಮಾನ್ ಕನ್ನಡಿಗರಿಗೋಸ್ಕರವೇ ಕನ್ನಡಮಯ ವಾತಾವರಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಹಲವು ಕನ್ನಡಿಗ ಸಮಾನ ಮನಸ್ಕರು ಸೇರಿ ೨೦೧೨ ರಲ್ಲಿ ಉತ್ತಮ ಗುಣಮಟ್ಟದ ಆಧ್ಯಾತ್ಮಿಕ ಕಾರ್ಯಗಳನ್ನು ನೀಡಬೇಕೆಂಬ ಉತ್ತಮ ಸದುದ್ದೇಶದಿಂದ ಆರಂಭವಾದದ್ದೇ ಓಂಕಾರ ಸಮಿತಿ (ಓಮಾನ್ ಕರ್ನಾಟಕ ಆರಾಧನ ಸಮಿತಿ). ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಓಂಕಾರ ಸಮಿತಿಯ ರುವಾರಿಗಳಾದ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಲಾಯಿತು.
ಓಂಕಾರ ಸಮಿತಿಯು ಭಕ್ತಿ, ಜ್ಞಾನ ಮತ್ತು ಸಂಗೀತ ಎಂಬ ಮೂರು ಸ್ಥಂಬಗಳ ಆಧಾರಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಭಕ್ತಿಯ ಪ್ರತೀಕವಾಗಿ ಭಕ್ತಾಗ್ರೇಸರ ಶ್ರೀ ಓಂಕಾರ ಆಂಜನೇಯ ಪೂಜೆ, ಜ್ಞಾನದ ಪ್ರತೀಕವಾಗಿ ಓಂಕಾರ ಜ್ಞಾನಾಮೃತ ಮತ್ತು ಸಂಗೀತದ ಪ್ರತೀಕವಾಗಿ ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತ ಬಂದು ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ಈ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕನ್ನಡಿಗರೇ ನಡೆಸಿಕೊಂಡು ಬರುತ್ತಿರುವುದು ವಿಶೇಷ. ಈ ಎಲ್ಲಾ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯು ಸೇವಾ ಮನೋಭಾವದಿಂದ ಮಾಡಿಕೊಂಡು ಬರುತಿದ್ದು ನಿರಂತರತೆಯನ್ನು ಕಾಪಾಡಿಕೊಳ್ಳುತ್ತಿದೆ. ಓಮಾನ್ ಕನ್ನಡಿಗರಲ್ಲದೆ ಇತರೆ ರಾಜ್ಯದ ಜನರಿಗೂ ಸಹ ಓಂಕಾರ ಸಮಿತಿಯವರು ಮಾದರಿಯಾಗಿದ್ದಾರೆ.
ಬರಹ:- ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ