ಬುಧವಾರ, ಮಾರ್ಚ್ 20, 2024

ಶ್ರೀ ವೀರೇಶಾನಂದ ಸ್ವಾಮೀಜಿಗಳಿಂದ ಒಮಾನ್ ಕನ್ನಡಿಗ ಸಾಧಕರಿಗೆ ಸನ್ಮಾನ



    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರಲ್ಲೂ ದಿನೇ ದಿನೇ ಅಭಿವೃದ್ದಿ ಹೊಂದುತ್ತಿರುವ ತಾಂತ್ರಿಕ ಯುಗದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಪಡೆಯುವುದೇ ಒಂದು ಸಾಧನೆ. ವಿದೇಶಕ್ಕೆ ಹೋಗಿ ನೆಲೆಸಿ ದಶಕಗಳ ಕಾಲ ಕೆಲಸ ಮಾಡಿ ತಾಯ್ನಾಡಿಗೆ ಮರಳುವುದು ಸಣ್ಣ ಸಾಧನೆ ಏನಲ್ಲ. ವಲಸೆ ಹೋಗುವ ಪ್ರಕ್ರಿಯೆ ಇಂದು ನೆನ್ನೆಯದಲ್ಲ, ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿದೇಶಗಳಲ್ಲಿ ನಮ್ಮ ಲಕ್ಷಾಂತರ ಭಾರತೀಯರು ದುಡಿಯುತಿದ್ದಾರೆ. ಅಲ್ಲಿಯ ದುಡಿಮೆಯ ಜತೆಗೆ ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದು, ಇತರರನ್ನು ಬೆಳೆಸುವುದಲ್ಲದೆ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಬಹಳಷ್ಟು ಜನರು ಇದ್ದಾರೆ.  

    ಈ ಬೆಳವಣಿಗೆಯಲ್ಲಿ, ಶೂನ್ಯದಿಂದ ಸಾಧಿಸಿ ಯಶಸ್ಸು ಗಳಿಸಿದ್ದಲ್ಲದೆ, ಸಮಾಜ ಸಮುದಾಯಕ್ಕಾಗಿ ಕೊಡುಗೆ ನೀಡಿದವರು ಇಲ್ಲಿ ಬಹಳ ಮುಖ್ಯರಾಗುತ್ತಾರೆ. ಕೆಲವರು ತೆರೆಮರೆಯಲ್ಲಿಯೇ ಕೆಲಸ ಮಾಡುತಿದ್ದು, ಇನ್ನು ಕೆಲವರು ಮುಖ್ಯವಾಹಿನಿಯಲ್ಲಿ ಜನರೊಂದಿಗೆ ಬೆರೆತು ಜನರ ಆಶಯಗಳಿಗೆ ಸ್ಪಂದಿಸುತಿದ್ದಾರೆ. ಒಮಾನಿನಲ್ಲಿ ಇಂತಹ ಹಲವಾರು ಕನ್ನಡಿಗ ಸಾಧಕರಿದ್ದಾರೆ, ಸಮಾಜ ಸೇವಕರಿದ್ದಾರೆ. ಸಂಸ್ಥೆಗಳನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿದವರಿದ್ದಾರೆ. ಒಬ್ಬ ಸಾಮಾನ್ಯ ಉದ್ಯೋಗಿಯಾಗಿದ್ದುಕೊಂಡು ಸಂಸ್ಥೆಯ ಉನ್ನತ ಮಟ್ಟದ ಹುದ್ದೆಗೆ ಏರಿದವರು ಇದ್ದಾರೆ.  ಹೀಗೆ ಇವರೆಲ್ಲರೂ ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲವರು. ಅವರ ಕಾರ್ಯಗಳು ಬೇರೆಯವರಿಗೆ ಪ್ರೇರಣೆಯಾಗುವುದರಲ್ಲಿ ಸಂಶಯವೇ ಇಲ್ಲ.

    ಸಮುದಾಯದ ಅಭ್ಯುದಯಕ್ಕಾಗಿ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಇವರ ಕಾರ್ಯ ಮತ್ತಷ್ಟು ಜನರಿಗೆ ಪ್ರೇರೇಪಣೆ ನೀಡಿ, ಮುಂದಿನ ಪೀಳಿಗೆಯ ಜನಕ್ಕೆ ಇವರು ಮಾದರಿಯಾಗಲಿ ಎನ್ನುವ  ಉದ್ದೇಶದಿಂದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಮಾನ್ ಕನ್ನಡಿಗ ಗಣ್ಯರಿಗೆ  "ಒಮಾನ್ ಕನ್ನಡಿಗರ ವೇದಿಕೆಯು" ಇತ್ತೀಚೆಗೆ ನಡೆದ ಓಂಕಾರ ಸಮಿತಿಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವೀರೇಶಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.



ಶ್ರೀ ಜಿ.ವಿ.ರಾಮಕೃಷ್ಣ:  ಮಸ್ಕತ್ ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ "ಶ್ರೀ ಜಿ.ವಿ.ರಾಮಕೃಷ್ಣ" ರವರು ಒಮಾನಿನ ಬ್ಯಾಂಕಿಂಗ್ ವಲಯದಲ್ಲಿ ಚಿರಪರಿಚಿತರು. ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಸಮಯದಿಂದ ಒಮಾನ್ ರಾಷ್ಟ್ರದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ದೋಫಾರ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತಿದ್ದಾರೆ.  

ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನ ನಡೆಸಿ ಅದರಲ್ಲಿ ಸಫಲತೆ ಕಂಡು ಮತ್ತು ಹಲವಾರು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿ  ಬ್ಯಾಂಕ್ ಗಳ ಲಾಭವನ್ನು ಮತ್ತು ಗ್ರಾಹಕರ ಸಂಖ್ಯೆಯನ್ನೂ ದ್ವಿಗುಣ ಗೊಳಿಸುವುದರಲ್ಲಿ ಇವರ ಶ್ರಮವೂ ಮಹತ್ತರವಾಗಿದೆ.  ಇವರ ಉನ್ನತ ವಿದ್ಯಾರ್ಹತೆ ಮತ್ತು ಅಪಾರವಾದ ಅನುಭವವನ್ನು ಗುರುತಿಸಿ ನಿಝ್ವಾ ಯೂನಿವರ್ಸಿಟಿಯ  (ನಿಝ್ವಾ ವಿಶ್ವವಿದ್ಯಾಲಯ) ಬೋರ್ಡ್ ನಲ್ಲಿ ಇವರಿಗೆ ಸದಸ್ಯತ್ವವನ್ನು ನೀಡಿದ್ದಾರೆ. ಇಂತಹ ಉನ್ನತವಾದ ಸ್ಥಾನವನ್ನು ಪಡೆದ ಮೊದಲ ಒಮಾನ್ ಕನ್ನಡಿಗ ಇವರಾಗಿದ್ದಾರೆ.

    ಒಮಾನಿನ ಕನ್ನಡ ಸಮುದಾಯದ ಹಲವಾರು ಕಾರ್ಯಕ್ರಮಗಳಿಗೆ ಇವರು ಕಾರ್ಯ ನಿರ್ವಹಿಸುತಿದ್ದ ಬ್ಯಾಂಕ್ ಗಳಿಂದ ಪ್ರಾಯೋಜಕತ್ವ ನೀಡಿದ್ದಲ್ಲದೆ ತಮ್ಮ ಸ್ವಂತ ಸಂಪಾದನೆಯ ಹಣವನ್ನು ಸಹ ಆಧ್ಯಾತ್ಮಿಕ ಮತ್ತು ಸಮಾಜ ಸೇವೆಯ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ. ಬಹಳಷ್ಟು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು, ಕಾರ್ಯಕ್ರಮಗಳ ಆಯೋಜಕರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾರೆ. ಇಂತಹ ಅಪರಿಮಿತ ಸಹಕಾರದಿಂದ ಕರ್ನಾಟಕ ಮೂಲದ ಸಾಂಸ್ಕೃತಿಕ ಸಂಘ ಸಂಸ್ಥೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತ ಬಂದಿವೆ. ಹಿರಿಯರು ಕಿರಿಯರು ಎನ್ನದೆ, ಎಲ್ಲರೊಂದಿಗೆ ಆತ್ಮಿಯವಾಗಿ ಬೆರೆತು ಕಷ್ಟ ಸುಖ ವಿಚಾರಿಸುವ ಇವರದು ಬಹಳ ದೊಡ್ಡಗುಣ. 


ಶ್ರೀಮತಿ ಕವಿತಾ ರಾಮಕೃಷ್ಣ: ಶ್ರೀ ಜಿ.ವಿ.ರಾಮಕೃಷ್ಣ ರವರ ಧರ್ಮಪತ್ನಿಯವರಾದ ಶ್ರೀಮತಿ ಕವಿತಾ ರಾಮಕೃಷ್ಣ ರವರು ಅಪ್ರತಿಮ ಸಾಧಕರು. ಇವರು ತಂಜಾವೂರು ಶೈಲಿಯ ಚಿತ್ರಕಲೆ ರಚಿಸುವುದರಲ್ಲಿ ನಿಪುಣರು. ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ವಿಜೇತರು, ಮಸ್ಕತ್ ನಲ್ಲಿ ಯೋಗ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಇವರು ಬಹಳ ಹೆಸರುವಾಸಿ. ಇವರು ಸಂಸ್ಕೃತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ,  

    ಯೋಗ ಸಾಧನೆ ಮತ್ತು ಸಮಾಜ ಸೇವೆಗೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿಲಾಗಿದೆ. ಕೋವಿಡ್‌ಸಾಂಕ್ರಾಮಿಕದ ಸಂದರ್ಭದಲ್ಲಿ ಸೂರ‍್ಯ ನಮಸ್ಕಾರ ಮತ್ತು ವಿವಿಧ ಯೋಗಾಸನದ ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆಂದು ಸಾರುತ್ತಾ ಒಮಾನ್‌ ರಾಜವಂಶಸ್ಥರೂ ಸೇರಿದಂತೆ ಹಲವರಿಗೆ ಕವಿತಾ ಯೋಗ ಕಲಿಸಿಕೊಟ್ಟ ಹೆಗ್ಗಳಿಕೆ ಇವರಿಗೆ ಇದೆ.

    ಪ್ರಶಸ್ತಿಗಳು: ವಿದೇಶದಲ್ಲಿ ನೆಲೆಸಿ, ಸಂಸ್ಕೃತ ಭಾಷೆಯ ಏಳ್ಗೆ, ಕಲೆ,  ಯೋಗ ಮತ್ತು ಧ್ಯಾನದ  ಅಭಿವೃದ್ಧಿಗಾಗಿ ಶ್ರಮಿಸಿರುವ ಇವರ ಸಾಧನೆಯನ್ನ ಗುರುತಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2018ರಲ್ಲಿ  ಪ್ರತಿಷ್ಟಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಒಮಾನ್ ನಲ್ಲಿ ಅಲ್ಮಾರಾ ಶ್ರೇಷ್ಠ ಪ್ರಶಸ್ತಿ 2018,  ಒಮಾನ್ ವರ್ಷದ ಮಹಿಳೆ ಪ್ರಶಸ್ತಿ 2019 ಹಾಗೂ 2023 ರ ಏಷ್ಯಾದ ಅತ್ಯಂತ ಸ್ಪೂರ್ತಿದಾಯಕ ಐಕಾನ್ ಪ್ರಶಸ್ತಿ ಇವರಿಗೆ ಲಭಿಸಿದೆ. ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

    ಕವಿತಾರವರು ಸಂಸ್ಕೃತ, ಯೋಗ ಚಿತ್ರಕಲೆ ಮಾತ್ರವಲ್ಲದೆ, ಸಾಹಿತ್ಯದಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಒಮಾನ್ ನ ಪ್ರೀತಿ ಬಂಧಕ್ಕೆ ಮನಸೋತು ಕನ್ನಡದಲ್ಲಿ ಮಸ್ಕತ್ ಬಗ್ಗೆ 'ನಾ ಕಂಡ ಮಸ್ಕಟ್' ಎನ್ನುವ ಪುಸ್ತಕ ಬರೆದಿದ್ದಾರೆ. ಒಮಾನ್ ನ ದಿನಪತ್ರಿಕೆಗಳಲ್ಲದೆ, ಕರ್ನಾಟಕದ ವಿಶ್ವವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಲೇಖನಗಳನ್ನ ಬರೆದಿದ್ದಾರೆ. 



"ಶ್ರೀ ಶಶಿಧರ್ ಶೆಟ್ಟಿ ಮಲ್ಲರ್": ಕರ್ನಾಟಕದ ಕರಾವಳಿ ಜಿಲ್ಲೆಯಾದ ಉಡುಪಿಯ ಕಾಪು ಗ್ರಾಮದವರು. ಮಸ್ಕತ್ ನಲ್ಲಿ ಕಳೆದ ನಾಲ್ಕು ದಶಕಗಳಿಂದ ನೆಲೆಸಿರುವ ಇವರು ಅಬೀರ್ ಗ್ರೂಪ್ ಆಫ್ ಕಂಪನಿಗಳ (Abeer Group of Companies) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಮಸ್ಕತ್ ನಲ್ಲಿ ನೆಲೆಸಿರುವ ಉಡುಪಿ ಮಂಗಳೂರು ಭಾಗದವರು ಇವರ ಹೆಸರನ್ನ ಕೇಳಿರದೇ ಇರಲಾರರು. ಅಷ್ಟರ ಮಟ್ಟಿಗೆ ಇವರು ಜನರಿಗೆ ಚಿರಪರಿಚಿತರು. ಅಂದಾಜು ನಾಲ್ಕು ದಶಕಗಳ ಕಾಲ ಒಮಾನಿ ನಲ್ಲಿ ನೆಲೆಸಿ ಇವರು ಮಾಡಿರುವ ಸಮಾಜ ಸೇವೆಗಳ ದೊಡ್ಡ ಪಟ್ಟಿಯೇ ಇದೆ. ಅದ್ಯಾವುದರ ಗುಟ್ಟು ಬಿಟ್ಟುಕೊಡದ ಇವರು, ವೃತ್ತಿ ಮತ್ತು ಸೇವೆಯನ್ನು ಸರಿದೂಗಿಸಿಕೊಂಡು ಹೋಗುತಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಿಂದ ಅವರನ್ನ ಬಲ್ಲ ಪ್ರತಿಯೊಬ್ಬರು ಅವರ ಕೆಲಸಕಾರ್ಯಗಳನ್ನ ಇಂದಿಗೂ ನೆನೆಯುತ್ತಾರೆ

ಕಷ್ಟದಲ್ಲಿರುವವರಿಗೆ ಹಲವಾರು ರೀತಿಯಲ್ಲಿ ನೆರವು ನೀಡಿದ್ದಾರೆ. ಊರಿನ ಬಡ ನಿರುದ್ಯೋಗಿಗಳಿಗೆ ತಮ್ಮ ಸಂಸ್ಥೆಗಳಲ್ಲಿ ಕೆಲಸ ನೀಡಿ ಅವರಿಗೆ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಊರಿನ ಮೂರು ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ದೇವಸ್ಥಾನಗಳ ಟ್ರಸ್ಟಿ ಯಾಗಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ಹಣವನ್ನ ದೇಣಿಗೆ ನೀಡಿದ್ದಾರೆ. ಮಸ್ಕತ್ ನ ಹಲವಾರು ಸಂಘ ಸಂಸ್ಥೆಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ. 

ಒಮಾನ್ ನಲ್ಲಿ ಮೃತ ಪಟ್ಟವರ ದೇಹಗಳನ್ನ ಊರಿಗೆ ಕಳುಹಿಸುವುದು ಒಂಡು ದೊಡ್ಡ ಪ್ರಾಸೆಸ್. ಮೃತರ ದೇಹವನ್ನು ಹಿಂತಿರುಗಿಸಲು ಬೇಕಾದ ಡಾಕ್ಯುಮೆಂಟ್ ಗಳು, ಪೋಲೀಸ್ ಕ್ಲಿಯರೆನ್ಸ್ ಮತ್ತಿತರ ಕಾರ್ಯಗಳನ್ನ ನೆರವೇರಿಸಿದ್ದಾರೆ. ಅದಕ್ಕಾಗಿ ಒಂದು ತಂಡವನ್ನು ಕಟ್ಟಿದ್ದಾರೆ. ಒಮಾನ್ ನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಇಚ್ಚೆಪಟ್ಟವರಿಗೆ, ಈವರೆಗೆ ಸುಮಾರು 67 ಜನರ ಅಂತ್ಯಕ್ರಿಯೆಯನ್ನು ನೆರವೇರಿಸಲು ಶ್ರಮಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ ತಲೆದೋರಿದ ಸಂಧರ್ಭದಲ್ಲಿ, ದಹನ ಕ್ರಿಯೆ ನಡೆಸಲು ಸೌದೆಯ ಕೊರತೆ ಕಂಡು ಬಂದಾಗ, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಲ್ಲದೆ. ಮೃತ ದೇಹಗಳ ದಹನ ಮಾಡಲು ಎಲೆಕ್ಟ್ರಿಕ್ ಓವೆನ್ ಅನ್ನು ಸೋಹರ್ ನಲ್ಲಿ ಸ್ಥಾಪಿಸಿದ್ದಾರೆ.  



"ಶ್ರೀ ಹಿರಿಯಣ್ಣ ನಾರಾಯಣ ಸ್ವಾಮಿ": ಅವರು ಮೂಲತಃ ಹಾಸನ ಜಿಲ್ಲೆಯ ಶ್ರವಣಬೆಳಗೊಳದವರು.  ಬಡ ಶಾಲಾ ಶಿಕ್ಷಕರ ಪುತ್ರರಾದ ಇವರು ಇಂದು  ಒಮಾನಿನ ಹೆಸರಾಂತ Al Maha Petroleum ಕಂಪನಿಯ Chief Financial Officer - CFO (ಮುಖ್ಯ ಹಣಕಾಸಿನ ಅಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಬಡತನದಲ್ಲಿ ಬೆಳೆದು ಶಿಕ್ಷಣವನ್ನು ಪಡೆದು ಇಂದು ಉನ್ನತ ಹುದ್ದೆ ಪಡೆಯುವ ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಕಡಿಮೆ ಸಾಧನೆ ಏನಲ್ಲ.  ಕಳೆದ ಮೂರು ದಶಕಗಳಿಂದ ಒಮಾನಿನಲ್ಲಿ ಉದ್ಯೋಗ ಮಾಡುತಿದ್ದಾರೆ.  

    ತಾವು ಬೆಳೆಯುವುದರ ಜತೆಗೆ ಸದ್ದಿಲ್ಲದೆ ಸಮಾಜ ಮುಖಿ ಕೆಲಸಗಳನ್ನು ಮಾಡುತಿದ್ದಾರೆ, ಎಡಗೈ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವಂತೆ  ಹಲವಾರು ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಸ್ವಂತ ಹಣವನ್ನು ದೇಣಿಗೆಯನ್ನಾಗಿ ನೀಡುತಿದ್ದಾರೆ.  ತಮ್ಮ ಕಂಪನಿಯ ಪ್ರಾಯೋಜಕತ್ವದ ಹಣವನ್ನು ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಗಳಿಗೆ ಕೊಡಿಸುವ ಕೆಲಸವನ್ನು ಮಾಡುತಿದ್ದಾರೆ. 

    ಕಲೆಯಲ್ಲಿ ಅಭಿರುಚಿಯನ್ನಿಟ್ಟುಕೊಂಡಿರುವ ಇವರು ನಾಟಕಗಳಿಗೆ ಕಥೆ, ಸಂಭಾಷಣೆ ಬರೆಯುವ ಮತ್ತು ನಿರ್ದೇಶಿಸುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಮಸ್ಕತ್ ನ ಕರ್ನಾಟಕ ಸಂಘದ ಸಾಂಸ್ಕೃತಿಕ ವೇದಿಕೆಯಲ್ಲಿ ಕೆಲವು ನಾಟಕಗಳನ್ನು ಪ್ರಸ್ತುತ ಪಡಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ಇವರು ಸಿದ್ದಹಸ್ತರು. ನಾಟಕ ಮಾಡೋಣ ಬನ್ನಿ ಎಂದು ಯಾರಾದರು ಕರೆದರೆ, ನಾನು ಸದಾಸಿದ್ದ ಎನ್ನುವ ಕ್ರಿಯಾಶೀಲ ವ್ಯಕ್ತಿತ್ವದವರು. ಇವರ ಬಳಿ ಹಲವಾರು ನಾಟಕದ ಕಥೆಗಳು ಇವೆ. ಆಸಕ್ತರು ಬಂದರೆ ಅವರಿಗೆ ನಾಟಕವನ್ನು ಕಲಿಸಿಕೊಡುವುದರಲ್ಲಿ ನಿಸ್ಸೀಮರು. ಹಿರಿಯಣ್ಣನವರದು ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವ ವ್ಯಕ್ತಿತ್ವದವರು. 



"ಓಂಕಾರ ಸಮಿತಿಯ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್":

ಒಮಾನ್ ಕನ್ನಡಿಗರಿಗೋಸ್ಕರವೇ ಕನ್ನಡಮಯ ವಾತಾವರಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಹಲವು ಕನ್ನಡಿಗ ಸಮಾನ ಮನಸ್ಕರು ಸೇರಿ ೨೦೧೨ ರಲ್ಲಿ ಉತ್ತಮ ಗುಣಮಟ್ಟದ ಆಧ್ಯಾತ್ಮಿಕ ಕಾರ್ಯಗಳನ್ನು ನೀಡಬೇಕೆಂಬ ಉತ್ತಮ ಸದುದ್ದೇಶದಿಂದ ಆರಂಭವಾದದ್ದೇ ಓಂಕಾರ ಸಮಿತಿ (ಓಮಾನ್ ಕರ್ನಾಟಕ ಆರಾಧನ ಸಮಿತಿ). ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಓಂಕಾರ ಸಮಿತಿಯ ರುವಾರಿಗಳಾದ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಲಾಯಿತು. 

    ಓಂಕಾರ ಸಮಿತಿಯು ಭಕ್ತಿ, ಜ್ಞಾನ ಮತ್ತು ಸಂಗೀತ ಎಂಬ ಮೂರು ಸ್ಥಂಬಗಳ ಆಧಾರಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಭಕ್ತಿಯ ಪ್ರತೀಕವಾಗಿ ಭಕ್ತಾಗ್ರೇಸರ ಶ್ರೀ ಓಂಕಾರ ಆಂಜನೇಯ ಪೂಜೆ, ಜ್ಞಾನದ ಪ್ರತೀಕವಾಗಿ ಓಂಕಾರ ಜ್ಞಾನಾಮೃತ ಮತ್ತು ಸಂಗೀತದ ಪ್ರತೀಕವಾಗಿ ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತ ಬಂದು ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ಈ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕನ್ನಡಿಗರೇ ನಡೆಸಿಕೊಂಡು ಬರುತ್ತಿರುವುದು ವಿಶೇಷ. ಈ ಎಲ್ಲಾ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯು ಸೇವಾ ಮನೋಭಾವದಿಂದ ಮಾಡಿಕೊಂಡು ಬರುತಿದ್ದು ನಿರಂತರತೆಯನ್ನು ಕಾಪಾಡಿಕೊಳ್ಳುತ್ತಿದೆ. ಓಮಾನ್ ಕನ್ನಡಿಗರಲ್ಲದೆ ಇತರೆ ರಾಜ್ಯದ ಜನರಿಗೂ ಸಹ ಓಂಕಾರ ಸಮಿತಿಯವರು ಮಾದರಿಯಾಗಿದ್ದಾರೆ. 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


ಮಂಗಳವಾರ, ಮಾರ್ಚ್ 19, 2024

ಮಸ್ಕತ್ ಕನ್ನಡಿಗರ ಕುಲಪುರೋಹಿತ ಆಚಾರ್ಯರು

ಲೇಖನ - ಸುಧಾ ಶಶಿಕಾಂತ್ಮಸ್ಕತ್ 

ಉದ್ಯೋಗಕ್ಕಾಗಿ ವಿದೇಶಕ್ಕೆ ಬಂದು ನೆಲೆಸುವುದು ಭಾರತಿಯರಿಗಂತೂ ಸಾಮಾನ್ಯವಾದ ವಿಚಾರ. ಮಧ್ಯಪ್ರಾಚ್ಯದ ದೇಶಗಳು ಭಾರತಿಯರ ಎರಡನೆಯ ಮನೆ ಅಂತಲೇ ಹೇಳಬಹುದು.  ಈ ಮರಳುಗಾಡನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಸಾಧ್ಯವಿದ್ದಷ್ಟು ವರ್ಷ ಇಲ್ಲಿ ಕೆಲಸ ಮಾಡಿ, ಇಲ್ಲಿ ಉಳಿಸಿದ ಹಣದಿಂದ ಸ್ವದೇಶದಲ್ಲಿ ಮನೆ ಮಠ ಮಾಡಿಕೊಂಡು ಮತ್ತೆ ಭಾರತಕ್ಕೆ ಹೋಗಿ ನಿವೃತ್ತ ಜೀವನವನ್ನು ಕಳೆಯುವುದು ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಜೀವನ ನಿಯಮ. ಆದರೆ ಇಲ್ಲಿ ಬಂದು ನೆಲಸಿ ಇಲ್ಲಿನ ನೆಲದಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳಸಿ, ನಮ್ಮ ಪರಂಪರೆಯ ಒಂದು ಭದ್ರವಾದ ಬುನಾದಿಯನ್ನೇ ಹಾಕಿಕೊಟ್ಟು, ತಾವು ನೆಲಸಿದಲ್ಲೆಲ್ಲ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಅಂತಹ ಒಬ್ಬ ಅಪರೂಪದ ಮಸ್ಕತ್ತಿನ ಕನ್ನಡಿಗ ನಮ್ಮ  ಶ್ರೀ ಕಲ್ಮಂಜೇ ಲಕ್ಷ್ಮೀ ನಾರಾಯಣ ಆಚಾರ್ಯರು. ಮಸ್ಕತ್ ಕನ್ನಡಿಗರಿಗೆ ತಂದೆಯಂತೆ ಇದ್ದು ಆಧ್ಯಾತ್ಮ ವೈದಿಕ ಪರಂಪರೆಯ ದೀಪವನ್ನು ಈ ಬಿಸಿಲುಭೂಮಿಯ ಮನೆ ಮನೆಯಲ್ಲಿ ಬೆಳಗಿ, ಅದಕ್ಕೊಂದು ಶ್ರೀಮಂತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ನಗುಮುಖದ ಆಚಾರ್ಯರು ಸಂಪರ್ಕಕ್ಕೆ ಬಂದವರೆನ್ನೆಲ್ಲ ಸೆಳೆಯುತ್ತಿದ್ದ ಧೀಮಂತ ವ್ಯಕ್ತಿತ್ವ. ತಮ್ಮ ನಲವತ್ತೆರಡು ವರ್ಷಗಳ ಒಮಾನಿನನ ವಾಸದಲ್ಲಿ  ಇಲ್ಲಿರುವ ಭಾರತಿಯರೆಲ್ಲರಿಗೆ ಸಮಾಧಾನವನ್ನು ಹೇಳುವ ಹಿರಿಯಣ್ಣನಾಗಿ, ಇಲ್ಲಿನ ದೇವಾಲಯಗಳಲ್ಲಿ ನಡೆಯುವ ವೈದಿಕ ಸಂಪ್ರದಾಯದ ಪೂಜೆಗಳ ಮುಂದಾಳುವಾಗಿ, ಸಂಘಟಕನಾಗಿ ಅವರು ಮಾಡಿದ ಸಮಾಜ ಸೇವೆ ಅತ್ಯಮೂಲ್ಯವಾದದ್ದು



ವೈಯ್ಯಕ್ತಿಕ ಜೀವನ:-

ಉಡುಪಿಯಲ್ಲಿ ಶ್ರೀಮತಿ ಕಾವೇರಮ್ಮ ಮತ್ತು ಶ್ರೀ ಹಯವದನಾಚಾರ್ಯರ ಮಗನಾಗಿ ಜನಿಸಿದ ಆಚಾರ್ಯರ ವಿದ್ಯಾಭ್ಯಾಸ ಉಡುಪಿಯಲ್ಲಿ ಆಯಿತು. ಬಾಲ್ಯದಲ್ಲಿಯೇ ವೈದಿಕ ಪರಂಪರೆಯಲ್ಲಿ, ಆಚರಣೆಗಳಲ್ಲಿ ಆಸಕ್ತಿ ಬೆಳೆಯಲು ಅವರ ತಾತ ಕಾರಣರಾದರು. ಎಂಟು ವರ್ಷದ ಬಾಲಕ ಆಚಾರ್ಯರಿಗೆ ಉಪನಯನ ಮಾಡಿ ಪೂಜಾ ವಿಧಿ ವಿಧಾನಗಳನ್ನು ಅವರಿಗೆ ಅವರ ತಾತ ಕಲಿಸಿದರು. ಬಾಲ್ಯದಲ್ಲಿಯೇ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳನ್ನು ನೋಡುತ್ತಾ, ಮಾಡುತ್ತಾ ಆಚಾರ್ಯಮಾಡುತ್ತಾ ಆಚಾರ್ಯರು ಬೆಳೆದರು.  ಬಿ ಕಾಮ್ ಪದವಿಯ ನಂತರ ಉದ್ಯೋಗ ನಿಮಿತ್ತ 1982 ರಲ್ಲಿ ಒಮಾನಿನ ಸಲಾಲಕ್ಕೆ ಬಂದಿಳಿದ ಆಚಾರ್ಯರು ಅಲ್ಲಿನ ಉಡುಪಿ ಹೋಟೆಲಿನ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ 3-4 ವರ್ಷಗಳ ಉದ್ಯೋಗದ ಬಳಿಕ ಉಷಾ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1988 ರಲ್ಲಿ ಮಸ್ಕತ್ತಿಗೆ ಆಗಮಿಸಿದರು. ಅವರ ಪುತ್ರ ಗುರು ಇಲ್ಲಿಯೇ ಹುಟ್ಟಿ ಬೆಳೆದ. ಇವರು ರುವಿಯ ಒಮಾನ್ ಎಕ್ಸಪ್ರೆಸ್ ಹೋಟೆಲಿನಲ್ಲಿ  ಮ್ಯಾನೇಜರ್ ಆಗಿ,  ಇಲ್ಲಿನ ಅನೇಕ ಖಾಸಗಿ ಕಂಪನಿಗಳಲ್ಲಿ ಲೆಕ್ಕ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಾ  2019 ರಲ್ಲಿ ನಿವೃತ್ತಿ ಹೊಂದಿದರು. ಅಷ್ಟರಲ್ಲಿಯೇ ಅವರ ಪುತ್ರ ಇಲ್ಲಿಯೇ ಉದ್ಯೋಗ ಆರಂಭಿಸಿದ್ದರಿಂದ ತಮ್ಮ ವಾಸವನ್ನು ನಿವೃತ್ತಿಯ ನಂತರವೂ ಪತ್ನಿಯೊಂದಿಗೆ ತಮ್ಮ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಮುಂದುವರಿಸಿದ್ದರು.

 

ಮಸ್ಕತ್ತಿನ ಸಾರ್ವಜನಿಕ ಉತ್ಸವಗಳಲ್ಲಿ ಆಚಾರ್ಯರು :-

ಬಾಲ್ಯದ ಅವರ ಆಸಕ್ತಿಯಾದ ಪೂಜೆಗಳು ದೈವಭಕ್ತಿ ಆಚಾರ್ಯರ ವ್ಯಕ್ತಿತ್ವದ ಭಾಗವೇ ಆಗಿತ್ತು. ಹಾಗಾಗಿ ಅವರು ತಮ್ಮ ಈ ಆಸಕ್ತಿಯ ಕ್ಷೇತ್ರವನ್ನು ಮರಳುಗಾಡಿನ  ಈ ಮುಸ್ಲಿಮ್ ದೇಶದಲ್ಲಿಯೂ ಮುಂದುವರಿಸಿದರು. ಮಸ್ಕತ್ತಿಗೆ ಬಂದ ಸ್ವಲ್ಪ ಸಮಯದಲ್ಲಿಯೇ ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ತುಳುಕೂಟದ ಸಾರ್ವಜನಿಕ ಗಣೇಶೋತ್ಸವದ ಪೂಜೆಯ ಹೊಣೆಯನ್ನು ಹೊತ್ತು 2006 ರ ವರೆಗೆ  ಸುಮಾರು 20 ವರ್ಷಗಳು ನಿರಂತರವಾಗಿ ಮಸ್ಕತ್ತಿನ ಸಾರ್ವಜನಿಕ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ  ಸೇವೆ ಸಲ್ಲಿಸಿದ್ದರು ಪ್ರತೀವರ್ಷ ಈ ಪೂಜೆಯಲ್ಲಿ ಒಂದೊಂದು ಬದಲಾವಣೆಯನ್ನು ತಂದಿದ್ದರು. ಭಕ್ತರೂ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತಾಗಲು ಲಡ್ಡುಸೇವೆ, 108 ಕಾಯಿ ಸೇವೆ, ರಂಗಪೂಜೆ ಮುಂತಾದ ಹೊಸ ಸೇವೆಗಳನ್ನು ಆರಂಭಿಸಿದರು. ಮಹಾರಾಷ್ಟ್ರೀಯರು ನಡೆಸುವ ಸಾರ್ವಜನಿಕ ಗಣೇಶೋತ್ಸವದ ಪೂಜೆಯನ್ನೂ ಹಲವು ವರ್ಷ ಆಚಾರ್ಯರು ಮಾಡಿದ್ದಾರೆ.

1997 ರಲ್ಲಿ ಸಮಾನ ಮನಸ್ಕರೊಂದಿಗೆ ಇವರು ಆರಂಭಿಸಿದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಹೋತ್ಸವವು ಕಳೆದ ಇಪ್ಪತ್ತೇಳು ವರ್ಷಗಳಿಂದ ಪ್ರತೀ ವರ್ಷವೂ ತಪ್ಪದೇ  ನಡೆಯುತ್ತ ಬಂದಿದೆ. ಅನೇಕ ವರ್ಷ ಮನೆಗಳಲ್ಲಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಧ್ಯ ಆರಾಧನೆ ಆಚಾರ್ಯರ ಮನೆಯಲ್ಲಿಯೇ ನಡೆಯುತ್ತಿತ್ತು.  ಸುಮಾರು 2005 ರಿಂದ ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಾ ಬಂದಿದೆ.



ಇಲ್ಲಿ  ಅನೇಕ ದೊಡ್ಡ ಭಾರತೀಯ ಉದ್ಯಮಿಗಳು ಹಲವು ರೀತಿಯ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ.. ಅಂತಹ ಉದ್ಯಮಗಳ ದೀಪಾವಳಿಯ ಲಕ್ಷ್ಮಿ ಪೂಜೆ, ಗಣಹೋಮ, ಇವುಗಳನ್ನೆಲ್ಲ ಆಚಾರ್ಯರು ಮಾಡುತ್ತಿದ್ದರು.

ಓಂಕಾರ ಸಮಿತಿ  (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಎಂಬ ಸಮಾನ ಮನಸ್ಕರ ಗುಂಪು 2011 ರಲ್ಲಿ ರೂಪುಗೊಂಡು ಇಲ್ಲಿ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವನ್ನು ಆರಂಭಿಸಿದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸುಮಾರು 10 ವರ್ಷಗಳ ಕಾಲ ಇವರು ನಡೆಸುವ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವಲ್ಲದೇ ಬಂಟರು, ವಿಶ್ವ ಕರ್ಮ, ತುಳುವರು, ಅಯ್ಯಪ್ಪ ಪೂಜೆ-  ಹೀಗೇ ಯಾವುದೇ ಸಮುದಾಯದವರು ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿ ಆಹ್ವಾನ ನೀಡಿದರೂ ನಗುತ್ತಲೇ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದ ಆಚಾರ್ಯರು ಭಕ್ತಿ ಮತ್ತು ನಿಷ್ಠೆಯಿಂದ ಅವನ್ನು ನೆರವೇರಿಸುತ್ತಿದ್ದರು.

ಸತ್ಯನಾರಾಯಣ ಪೂಜೆ ಮತ್ತು ಆಚಾರ್ಯರು:-

2006 ರಲ್ಲಿ ಅವರ ತಂದೆಯ ಸಲಹೆಯಂತೆ ಮನೆಗಳಿಂದ ಆಹ್ವಾನ ಬಂದಾಗ ಹೋಗಿ ಸತ್ಯನಾರಾಯಣ ಪೂಜೆಯನ್ನು ಮಾಡಿಸಲು ತೊಡಗಿದ ಆಚಾರ್ಯರು ಮುಂದಿನ ವರ್ಷಗಳಲ್ಲಿ ಮಸ್ಕತ್ತಿನಲ್ಲಿ ಸತ್ಯನಾರಾಯಣ ಪೂಜೆಗೆ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದರು. ಅವರ ಸ್ಪಷ್ಟ ಮಂತ್ರೋಚ್ಚಾರಣೆ,  ಕನ್ನಡ, ತುಳು, ಹಿಂದಿ- ಹೀಗೆ ಯಾವ ಭಾಷೆಯಲ್ಲಿ ಬೇಕಾದರೂ ಕಥೆ ಹೇಳುವ ಸಾಮರ್ಥ್ಯ, ಪೂಜೆಗೆ ಬಂದವರೆನ್ನೆಲ್ಲ ಸೇರಿಸಿಕೊಂಡು ವಿಷ್ಣು ಸಹಸ್ರನಾಮ, ಭಜನೆಗಳನ್ನು ಮಾಡಿಸುವ ಅವರ ಕ್ರಮಗಳೆಲ್ಲ ಅವರನ್ನು ಮಸ್ಕತ್ ಕನ್ನಡಿಗರ ಕುಲಪುರೋಹಿತರನ್ನಾಗಿಸಿತು. ಪೂಜೆ ಎಂದರೆ ಆಚಾರ್ಯರು, ಆಚಾರ್ಯ ರೆಂದರೆ ಪೂಜೆ ಎಂಬಂತೆ ಇಲ್ಲಿ ನೆಲಸಿದ ನಮ್ಮೆಲ್ಲರ ಮನೋಭಾವವಾಯಿತು. ಯಾರ ಮನೆಗೆ ಹೋದರೆ ಅಲ್ಲಿ ಎನಿರುತ್ತದೋ ಅದರಲ್ಲಿಯೇ ಹೊಂದಿಕೊಂಡು, ಪೂಜೆಯ ತಯಾರಿಯನ್ನೆಲ್ಲ ತಾವೇ ಮಾಡಿಕೊಂಡು ಭಕ್ತಿಯಿಂದ ಆಚಾರ್ಯರು ಮಾಡುತ್ತಿದ್ದ ಸತ್ಯನಾರಾಯಣ ಪೂಜೆಗೆ ತಲೆಭಾಗದವರೇ ಇಲ್ಲ. ಅಲ್ಲದೇ ಪೂಜೆ ಮಾಡಿಸಿದವರಿಗೆ ಮಾತ್ರವಲ್ಲ ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಈ ಪೂಜೆ ತಮ್ಮದೆಂಬ ಭಾವ ಬರುವಂತಹ ಧನಾತ್ಮಕ ವಾತಾವರವನ್ನು ತಮ್ಮ ಪೂಜೆಗಳಲ್ಲಿ ಆಚಾರ್ಯರು ತರಿಸುತ್ತಿದ್ದರು. ಇಂತಹ ಅಸಂಖ್ಯ ಪೂಜೆಗಳನ್ನು 2023 ರ ಆಕ್ಟೊಬರ್ ತನಕ ಬಿಡುವಿಲ್ಲದೆ ಆಚಾರ್ಯರು ಮಾಡಿಸಿದರು



ಉಡುಪಿ ಬ್ರಾಹ್ಮಣ ಸಮಾಜ:( UBS)-

2016 ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಆರಂಭವಾದ ಈ ಸಂಘವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಾಮಾಜ ಸೇವೆಯನ್ನು ಮಾಡುತ್ತ  ಒಮಾನ್ ಕನ್ನಡಿಗರನ್ನು, ಪ್ರಮುಖವಾಗಿ ಕರಾವಳಿ ಕರ್ನಾಟಕದ ಭಾಗದ ಜನರನ್ನು ಒಂದುಗೂಡಿಸುವಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಸೌರಮಾನ ಯುಗಾದಿ ಮತ್ತು ಶ್ರೀಕೃಷ್ಣನ ಜನ್ಮಾಷ್ಟಮಿ ಈ ಸಮೂಹದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಈ ಹಬ್ಬಗಳನ್ನು ಪ್ರತಿವರ್ಷ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಪ್ರಮುಖ ವಾರ್ಷಿಕ ಕಾರ್ಯಕ್ರಮ ವೆಂದರೆ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಂಗೀತ ಸೇವೆ. ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮ ಇವರ ಪ್ರಮುಖ ಆಕರ್ಷಣೆ. ಉಡುಪಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಲಕ್ಷ್ಮೀನಾರಾಯಣ ಆಚಾರ್ಯರು. ಇಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಯನ್ನು ಮೊದಲಿನಿಂದ ಕೊನೆಯತನಕ ಆಚಾರ್ಯರು  ವಹಿಸಿಕೊಂಡು ಎಲ್ಲರನ್ನೂ ಸೇರಿಸಿಕೊಂಡು ನಡೆಸುತ್ತಿದ್ದರು. ಉಡುಪಿ ಬ್ರಾಹ್ಮಣ ಮಹಿಳೆಯರಿಗೆ ಭಜನೆ ಹಾಡುವಂತೆ ಹುರಿದುಂಬಿಸಿ ಇವರ ಒಂದು ಭಜನಾ ಮಂಡಳಿಯನ್ನು ಆರಂಭಿಸುವಲ್ಲಿ ಆಚಾರ್ಯರ ಪಾತ್ರ ದೊಡ್ಡದಾಗಿದೆ. ತುಳಸಿ ಸಂಕೀರ್ತನೆಯನ್ನು ಗುಂಪಿನ ಸದಸ್ಯರಿಗೆ ಕಲಿಸಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಎದುರಿಗೆ ಪ್ರದರ್ಶಿಸಿ ಅವರಿಂದ ಭೇಷ್ ಎನಿಸಿಕೊಂಡಿದ್ದರು. ಪೂಜಾ ಕೈಂಕರ್ಯ, ಶ್ರೀಸೂಕ್ತದ ಪಾರಾಯಣ ಮುಂತಾದವನ್ನು ಎಲ್ಲರಿಗೂ ಕಲಿಸುವುದರಲ್ಲಿಯೂ ಉತ್ಸಾಹ ತೋರಿಸುತ್ತಿದ್ದ ಆಚಾರ್ಯರು ಮಸ್ಕತ್ತಿನ ಅನೇಕರಿಗೆ ಇವುಗಳನ್ನು ಕಲಿಸಿದ ಗುರುವೂ ಆಗಿದ್ದಾರೆ.

ಯು ಬಿ ಎಸ್ ಗುಂಪಿನ ಸದಸ್ಯರು ಹೇಳುವಂತೆ ಎಲ್ಲರಿಗೂ ಆಚಾರ್ ಅಣ್ಣನಾಗಿದ್ದ ಅವರ ಮನೆ ಮತ್ತು ಮನ ಯಾವಾಗಲೂ ತೆರೆದಿತ್ತು. ಸಂತೋಷ ಅಥವಾ ದುಃಖ  ಯಾವುದನ್ನೇ  ಹಂಚಿಕೊಳ್ಳಲು ಆಚಾರ್ಯ ದಂಪತಿಗಳು ತಯಾರಿದ್ದರು ಅವರು ತಮ್ಮ ನಗು, ತುಂಟತನದ ವರ್ತನೆಗಳಿಂದ ಗುಂಪಿನ ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಮಸ್ಕತ್ತಿನಲ್ಲಿ ಇತರೆ ಗುಂಪುಗಳು ಆಯೋಜಿಸುವ ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಯುಬಿಎಸ್ (UBS) ಸದಸ್ಯರ ಭಾಗವಹಿಸುವಿಕೆಗೆ ಅವರ ಪ್ರೋತ್ಸಾಹ ನೀಡುತ್ತಿದ್ದರು..ಅವರ ಪತ್ನಿ ಉಷಕ್ಕ ಆಚಾರ್ಯರ ಎಲ್ಲಾ ಧಾರ್ಮಿಕ ಆಚರಣೆಗಳನ್ನು  ಆಚರಣೆಗೆ ತರಲು ಆಚಾರ್ಯ ರೊಂದಿಗೆ ಶ್ರಮಿಸಿದರು . ಮಸ್ಕತ್‌ನಲ್ಲಿ  ಮೊಸರು ಕುಡಿಕೆ ಉತ್ಸವ, ತುಳಸಿ ಪೂಜೆ - ಯಾವುದನ್ನೂ ಮರೆಯದಂತೆ, ನಮ್ಮ ಊರಿನ ವಾತಾವರಣವನ್ನು ಇಲ್ಲಿಯೇ ಸೃಷ್ಟಿಸಿದರು.

ಭಾರತದಿಂದ ವಿದ್ಯಾಭೂಷಣರು, ಪ್ರವೀಣ್ ಗೋಡ್ಕಿಂಡಿ ಮುಂತಾದ ಸಂಗೀತ ಕಲಾವಿದರನ್ನು ಕರೆಸಿ ಒಳ್ಳೆಯ ಸಂಗೀತ ಕಾರ್ಯಕ್ರಮವನ್ನು ಮಸ್ಕತ್ ಕನ್ನಡಿಗರಿಗೆ ಏರ್ಪಡಿಸಿದ್ದರು. ಕಳೆದ ವರ್ಷ ಅಂದರೆ 2023ರಲ್ಲಿ ಪುತ್ತಿಗೆ ಪೀಠಾಧೀಶರಾದ ಸುಗುಣೇಂದ್ರ ತೀರ್ಥರು ಆಗಮಿಸಿ ಫೆಬ್ರುವರಿ 10 ರಿಂದ 16 ರ ತನಕ ಇಲ್ಲಿ ಆಚಾರ್ಯರ ಮನೆಯಲ್ಲಿ ನೆಲೆಸಿ ಕಾರ್ಯಕ್ರಮ ವನ್ನು  ನಡೆಸಿಕೊಟ್ಟರು.  ಉಡುಪಿ ಬ್ರಾಹ್ಮಣ ಸಮಾಜವು ತಾಯ್ನಾಡಿನಿಂದ ದೂರವಿರುವ ಕರಾವಳಿ ಪ್ರದೇಶದ ಬ್ರಾಹ್ಮಣರ ಒಂದು ದನಿಯಾಗಿ ಇಲ್ಲಿ ಬೆಳೆಯುವ ಆ ಭಾಗದ ಮಕ್ಕಳಿಗೆ ಅಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ತಿಳಿಸುವ ವೇದಿಕೆಯಾಗಿ, ಸಾಮಾಜಿಕ ಕಾರಣಗಳಿಗೆ ಸ್ಪಂದಿಸುತ್ತಾ ಊರಿನಲ್ಲಿ ಅಗತ್ಯವಿದ್ದವರಿಗೆ ಧನ ಸಹಾಯ ಮಾಡುತ್ತಾ, ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ



ಸ್ನೇಹಿತರು ಕಂಡಂತೆ ಆಚಾರ್ಯರು: -

ಆಚಾರ್ಯರು ತುಂಬಾ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳ ಜೀವನ ನಡೆಸುತ್ತಿದ್ದರು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ತಮ್ಮ ಬೆಳಗ್ಗಿನ ಪೂಜೆಯನ್ನೆಲ್ಲ ಮುಗಿಸುವ ತನಕ  ನೀರನ್ನೂ ಕುಡಿಯಿತ್ತಿರಲಿಲ್ಲವಂತೆ. ಏಕಾದಶಿ , ಸಂಕಷ್ಟ ಚತುರ್ಥಿಯ ಉಪವಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಆದರೆ ಅವರ ನಿಯಮ ಅನುಷ್ಠಾನಗಳು ಅವರ ಜೀವನ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಷ್ಟೇ ಆಸ್ಥೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ  ಆಚಾರ್ಯರು ಅಜಾತಾಶತ್ರುವಾಗಿದ್ದರು.

ಅವರ ಮಸ್ಕತ್ತಿನ ನಾಲ್ಕು ದಶಕಗಳ ಜೀವನದ ಒಡನಾಡಿಯಾಗಿದ್ದ  ಶ್ರೀ ಶಶಿಧರ ಶೆಟ್ಟರು ಹೇಳುವಂತೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವ ಸಕಾರಾತ್ಮಕ ಛಲ ಆಚಾರ್ಯರಲ್ಲಿ ಇತ್ತು. ಅವರೊಂದಿಗೆ ಸೇರಿ ಅನೇಕ ದೊಡ್ಡ ದೊಡ್ಡ ಪೂಜೆಗಳನ್ನು ಮಾಡಿಸಿದ್ದ ಇವರು ಅವರೊಂದಿಗಿನ ಸ್ನೇಹ ಮರೆಯಲಾಗದ್ದು ಎನ್ನುತ್ತಾ  ಅವರ ಅಗಲಿಕೆ ಸಹೋದರನನ್ನು ಕಳೆದುಕೊಂಡಂತೆ ಆಗಿದೆ ಎನ್ನುತ್ತಾರೆ.

ಅವರ ದೀರ್ಘ ಕಾಲದ ಸ್ನೇಹಿತರಲ್ಲಿ ಒಬ್ಬರಾದ ಶ್ರೀಮತಿ ರಾಜಶ್ರೀ ಮತ್ತು ಶ್ರೀ ಕೃಷ್ಣಪ್ರಸಾದ್ ಅವರು ಹೇಳುವಂತೆ ಅವರು ಎಲ್ಲರನ್ನು ಪ್ರೀತಿಸುವ ಆಧುನಿಕ ಸನ್ಯಾಸಿಯಾಗಿದ್ದರು. ಓಮಾನಿನಲ್ಲಿಯಾಗಲಿ ಅಥವಾ ಭಾರತದಲ್ಲಾಗಲೀ ತುಂಬಾ ಜನರ ಸಂಪರ್ಕವನ್ನು  ಹೊಂದಿದ್ದ ಅವರು ಯಾರಿಗಾದರೂ ಸಹಾಯ ಬೇಕೆಂದಾಗ ಥಟ್ ಎಂದು ಸರಿಯಾದ ವ್ಯಕ್ತಿಯೊಡನೆ   ಜೀವನವನ್ನು  ನೋಡುವ ಅವರ ವಿಧಾನ, ಯಾವುದೇ ಸಂಸ್ಥೆಯ, ಸಾಮಾಜಿಕ ಕೆಲಸದ  ಭಾಗವಾಗಲು  ಸದಾ ನಗುತ್ತಾ ತಯಾರಿರುವ ಅವರ ಇಚ್ಚಾಶಕ್ತಿ, ಅವರನ್ನು ಮಸ್ಕತ್‌ನಲ್ಲಿ  ಅಥವಾ ಒಮಾನಿನಲ್ಲಿ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿಸಿತು ಅವರು ವಸುದೈವ ಕುಟುಂಬಕಂ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಅವರ ನೆರಮನೆಯಲ್ಲಿದ್ದ ಪಾವನ ಕೌಸ್ತುಬ್ ಹೇಳುವಂತೆ  ಆಚಾರ್ಯರು ಜೀವನದ ಎಲ್ಲ ಅನುಭವಗಳನ್ನು  ಅಷ್ಟೇ ಲವವಿಕೆಯಿಂದ ಅನುಭವಿಸುತ್ತಿದ್ದರು. ತಮ್ಮ ನೆರೆಹೊರೆಯವರೊಂದಿಗೆ ಸೇರಿ ಸಂಭ್ರಮಿಸುವ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ  ಆಡುವ ವಿನೋದದ ಆಟಗಳಲ್ಲಿ, ನಾಟಕಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಭಾಗವಹಿಸುತ್ತ ತಮ್ಮ ಪತ್ನಿಯನ್ನೂ ಈ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿದ್ದರು.

ಇಂತಹ ವಿಶಿಷ್ಟ ವ್ಯಕ್ತಿತ್ವದ ಆಚಾರ್ಯರು 2023ರ ಡಿಸೆಂಬರ್ 8ರಂದು ಅಲ್ಪಕಾಲದ ಆಸ್ವಾಸ್ತ್ಯದಿಂದ  ಇಹಲೋಕ ತ್ಯಜಿಸಿದರು. ಅವರು ಇನ್ನಿಲ್ಲ ಅಂತ ಅಂದುಕೊಳ್ಳಲು ತುಂಬಾ ಕಷ್ಟವೆನಿಸುತ್ತದೆ. ಆದರೆ ವಿಧಿ ಬರೆದ ಈ ಕಠಿಣ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು.ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಭಾವನಾತ್ಮಕ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆಯಲ್ಲಿ ಅಚ್ಚಳಿಯದೆ ಇರುವ ನೆನಪುಗಳನ್ನು ಉಳಿಸಿದ್ದಾರೆ. ನಮ್ಮ ಮನೆಗಳಲ್ಲಿ ನಾವು ಸತ್ಯನಾರಾಯಣ ಪೂಜೆ ಮಾಡಿದಾಗ ನಮ್ಮ ಕಣ್ಮುಂದೆ ಬಂದೇ ಬರುತ್ತಾರೆ

"ಜಾತಸ್ಯ ಹಿ ಧ್ರುವಂ ಮೃತ್ಯು, ಧ್ರುವಂ ಜನ್ಮ ಮೃತಸ್ಯ ಚ; ತಸ್ಮಾದ್ ಅಪರಿಹಾರ್ಯೇ ನ ತುಂ ಸೋಚಿತುಮರ್ಹಸಿ" - ಎನ್ನುವ ಗೀತೆಯ ಶ್ಲೋಕದಂತೆ ಇಲ್ಲಿದ್ದವರೆಲ್ಲರೂ ಹೋಗಲೇಬೇಕು.  ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ನುಡಿಯಂತೆ ನಗುನಗುತ್ತಾ ಜೀವನಕ್ಕೆ ವಿದಾಯ ಹೇಳಿದ ಆಚಾರ್ಯರಿಗೆ ಅನಾಯಾಸೇನ ಮರಣ, ವಿನಾ ದೈನ್ಯೇನ ಜೀವಿತವನ್ನು ಅವರು ಅಗಾಧವಾಗಿ ನಂಬಿದ್ದ ಆ ಪರಮಾತ್ಮ ದಯಪಾಲಿಸಿದ್ದ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವು ಜೀವನ ನಡೆಸುವುದೇ ನಾವು ಅವರಿಗೆ ಕೊಡಬಹುದಾದ ಶ್ರದ್ಧಾಂಜಲಿ


ಬುಧವಾರ, ಸೆಪ್ಟೆಂಬರ್ 27, 2023

ಕೃಷಿ ಸ್ವಾವಲಂಬನೆಯತ್ತ ಅರಬ್ ರಾಷ್ಟ್ರಗಳು

ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್, ಬಹರೈನ್, ಯುಏಇ ಮತ್ತಿತರ ರಾಷ್ಟ್ರಗಳು ನಮ್ಮ ಭಾರತದಂತೆ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿಲ್ಲ ಇಲ್ಲಿನ ಬಹುತೇಕ ಜಾಗ ಮರುಭೂಮಿಯಿಂದ ಆವೃತವಾಗಿದೆ, ಮಳೆ ಬಹಳ ವಿರಳ, ನದಿ ಸರೋವರಗಳು ಇಲ್ಲಿ ಬಹಳ ಕಡಿಮೆ.  ಏಳೆಂಟು ತಿಂಗಳು ಬೇಸಿಗೆ ಕಾಲ, ಆ ಸಮಯದಲ್ಲಿ ಅತಿ ಹೆಚ್ಚು ಎಂದರೆ 40-55 ಡಿಗ್ರಿ .ಸೆಲ್ಶಿಯಸ್ ನಷ್ಟು ತೀಕ್ಷ್ಣವಾದ ಬಿಸಿಲು. ಇಂತಹ ವೈರುಧ್ಯಮಯವಾದ ವಾತಾವರಣದಲ್ಲಿ ಬೆಳೆ ಬೆಳೆಯುವುದು ಬಹಳ ಕಷ್ಟ. ಇಲ್ಲಿ ತೈಲ ಆವಿಷ್ಕಾರ ವಾಗುವವರೆಗೂ ನೂರಾರು ವರ್ಷಗಳಿಂದ ಇಲ್ಲಿನ ಜನರು ಭಾರತದಂತಹ ರಾಷ್ಟ್ರಗಳನ್ನ ಅಗತ್ಯ ವಸ್ತುಗಳಿಗಾಗಿ  ಅವಲಂಬಿಸಿದ್ದರು. ಆದರೆ, ಇಪ್ಪತ್ತನೇ ಶತಮಾನದಲ್ಲಿ ತೈಲದ ಆವಿಷ್ಕಾರದ ನಂತರ ಇಲ್ಲಿಯ ಬದುಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ತೈಲದ ಬೇಡಿಕೆ ದಿನೇ ದಿನೇ ಹೆಚ್ಚಿದಂತೆಲ್ಲ ತೈಲ ಉತ್ಪಾದನೆ ಹೆಚ್ಚಾಯಿತು. ಈ ತೈಲ ಮಾರಿ ಬಂದ ಹಣದಲ್ಲಿ ಇಲ್ಲಿನ ಮೂಲ ಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸಿದ್ದಲ್ಲದೆ, ದೇಶಕ್ಕೆ ಬೇಕಾದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನ ನಿರ್ಮಿಸಿ ಕೊಳ್ಳುತ್ತ ಬಂದಿದ್ದಾರೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಉತ್ಪನ್ನಗಳನ್ನು  ಪ್ರಪಂಚದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೇರಿಕ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳ ಉತ್ತಮ ಗುಣಮಟ್ಟದ ಹಣ್ಣು ತರಕಾರಿ, ದಿನಸಿ ವಸ್ತುಗಳನ್ನು ಆಮದು ಮಾಡಿಕೊಳ್ಳುತಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳಲ್ಲಿ ದೇಶ ವಿದೇಶಗಳ ವಸ್ತುಗಳು ದೊರೆಯುತ್ತಿವೆ.


 ಅರಬ್ ರಾಷ್ಟ್ರಗಳಲ್ಲಿ ಕೇವಲ ಮರುಭೂಮಿ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲದೆ ಕೆಲ ಪ್ರದೇಶಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ಸಹ ಇವೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳನ್ನು ಬೆಳೆಯುತಿದ್ದಾರೆ. ಕೆಲೆವೆಡೆ ಕೃಷಿ ಭೂಮಿ ಸೇರಿದಂತೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಅತ್ಯುನ್ನತ ತಂತ್ರಜ್ನಾನವನ್ನು ಉಪಯೋಗಿಸುತಿದ್ದಾರೆ. ಇವೆಲ್ಲವನ್ನ ಕಣ್ಣಾರೆ ನೋಡಿದಾಗ ಕೃಷಿಯನ್ನು ಹೀಗೂ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.

 ಮರುಭೂಮಿಯಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಭೂಪ್ರದೇಶದ ಸುಮಾರು 1.5% ಮಾತ್ರ ಕೃಷಿ ಮಾಡಲು ಯೋಗ್ಯವಾಗಿದೆ. ಹೀಗಾಗಿ ದೇಶದ ಅಗತ್ಯ ಆಹಾರ ಪೂರೈಕೆಯ 80% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಂದೊಂದು ದಿನ ಜಾಗತಿಕ ಆಹಾರ ಪೂರೈಕೆ ಜಾಲದಲ್ಲಿ ಏನಾದರು ಕುಸಿತ ಕಂಡರೆ ದೇಶ ಅಪಾಯಕ್ಕೆ ಸಿಲುಕುವ ಸಂಭವನೀಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆ ಜಾಲದ ಸಂಭವನೀಯ ಅಪಾಯಗಳನ್ನು ಮನಗಂಡು ಆಹಾರ ಭದ್ರತೆ ಗಾಗಿ ಅತ್ಯುನ್ನತ ವಿದೇಶಿ ತಂತ್ರಜ್ನಾನವನ್ನು ಉಪಯೋಗಿಸಿ ಮರುಭೂಮಿಯನ್ನು ಕೃಷಿಭೂಮಿಯನ್ನಾಗಿ ಸೌದಿ ಅರೇಬಿಯಾ ಪರಿವರ್ತಿಸುತ್ತಿದೆ.  ಇದರ ಪರಿಣಾಮ ಕೆಲೆವೆಡೆ ನೂರಾರು ಕಿ.ಮಿ.ಗಳಷ್ಟು ಉದ್ದಕ್ಕೂ ಕೃಷಿ ಚಟುವಟಿಕೆಯನ್ನು ಇಂದು ಕಾಣಬಹುದಾಗಿದೆ. ಇದರಿಂದಾಗಿ ಆಹಾರಕ್ಕಾಗಿ ಸಂಪೂರ್ಣ ಸುಸ್ಥಿರ ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತಿದೆ.

 ತುಬರ್ಜಲ್  ಎನ್ನುವ ಪ್ರದೇಶದಲ್ಲಿ ಲಕ್ಷಾಂತರ ಎಕರೆ ಮರುಭೂಮಿ ಇಂದು ಕೃಷಿಭೂಮಿಯಾಗಿ ಪರಿವರ್ತಿತ ಗೊಂಡಿದೆ. 300 ರಿಂದ 500 ಮೀಟರ್ ತ್ರಿಜ್ಯದ ವೃತ್ತಾಕಾರದಲ್ಲಿ ಈ ಕೃಷಿ ಭೂಮಿಗಳಿವೆ. ಗೂಗಲ್ ಮ್ಯಾಪ್ ನಲ್ಲಿ ನೋಡಿದರೆ ಚುಕ್ಕಿಗಳಂತೆ ಕಾಣುವ ಈ ಪ್ರದೇಶ ಸಾವಿರಾರು ಚದರ ಕಿ.ಮಿ. ನಷ್ಟು ಹರಡಿಕೊಂಡಿದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಇದರಿಂದ ಭೂಮಿಯ ಆಳದಲ್ಲಿರುವ ನೀರನ್ನು ತೆಗೆದು 300 ಮೀಟರ್ ರಿಂದ 500 ಮೀಟರ್ ತ್ರಿಜ್ಯದಲ್ಲಿ ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಮುಖಾಂತರ ಅಥವಾ ಸೆಂಟರ್-ಪಿವೋಟ್ ನೀರಾವರಿ ಪದ್ದತಿಯಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲದೆ ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಇನ್ನು ಮುಂತಾದ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸುತಿದ್ದಾರೆ. ಬಹುತೇಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಉಪಯೋಗಿಸುವುದರಿಂದ ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯತೆ ಕಂಡು ಬರುತ್ತಿಲ್ಲ. ನೀರಿನ ಬಳಕೆಯೂ ಇಲ್ಲಿ ಕಡಿಮೆ. ಇಲ್ಲಿ, ವಿವಿಧ ರೀತಿಯ ಹಣ್ಣು, ಹೂವು ತರಕಾರಿ, ಖರ್ಜೂರ, ಧವಸ ಧಾನ್ಯಗಳಾದ ಗೋಧಿ, ಬಾರ್ಲಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ 100% ಎಲ್ಲಾ ಕೃಷಿ ಉತ್ಪನ್ನಗಳು ದೇಶದೊಳಗೆ ಸರಬರಾಜಾಗುತಿದ್ದು, ಹೆಚ್ಚುವರಿ ಉತ್ಪನ್ನಗಳನ್ನ ಪಕ್ಕದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ಜತೆಗೆ, ನೂತನ ತಂತ್ರಜ್ನಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ಅನ್ನು ಕೆಲೆವೆಡೆ ಅಳವಡಿಸಿಕೊಂಡು ಕೃಷಿಮಾಡಲಾಗುತ್ತಿದೆ.

 ಒಮಾನ್ ರಾಷ್ಟ್ರವೂ ಸಹ ಕೃಷಿ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿದೆ.

 ಒಮಾನ್ ನಲ್ಲಿಯೂ ಸಹ ವಿವಿಧ ತರಹದ ಹೂ, ಹಣ್ಣು ಸೊಪ್ಪುಗಳನ್ನ ಬೆಳೆಯಲಾಗುತ್ತಿದೆ. ಇಲ್ಲಿಯೂ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಿದೆ. ಈ ತೋಟಗಳಲ್ಲಿ ಗೋಧಿ, ಬಾರ್ಲಿ, ಖರ್ಜೂರ, ಬಾಳೆಹಣ್ಣು, ಮಾವಿನಹಣ್ಣು, ಸೀಬೆ ಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಭೂಜ, ಸೋರೆಕಾಯಿ, ಕುಂಬಳ್ಕಾಯಿತೆಂಗಿನಕಾಯಿ, ಕೊತ್ತಂಬರಿ, ಪುದಿನ, ಲೆಟ್ಟ್ಯೂಸ್, ಬದನೆಕಾಯಿ, ಟೊಮಾಟೋ, ಕ್ಯಾಪ್ಸಿಕಮ್, ನಿಂಬೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ ಮುಂತಾದವಗಳನ್ನು ಇಲ್ಲಿ ಬೆಳೆಯುತ್ತಾರೆ. ಉತ್ಸಾಹಿ ಒಮಾನಿ ಕೃಷಿಕರು ವಿವಿಧ ರೀತಿಯ ಪ್ರಯೋಗಗಳನ್ನ ನಡೆಸುತ್ತಿರುವುದು ವಿಶೇಷ. ಮಲೆನಾಡಿನಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಹ ಇಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂಜೂರದ ಹಣ್ಣುಗಳು, ಏಪ್ರಿಕಾಟ್ಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಬೆಳೆಯುತ್ತಿರುವುದು ವಿಶೇಷವಾಗಿದೆ, ಯಾಕೆಂದರೆ ಇಲ್ಲಿನ ವಾತಾವರಣ ಅತಿ ಬಿಸಿಲಿನಿಂದ ಕೂಡಿದ್ದು, ಇಂತಹ ಅತಿ ಕಡಿಮೆ ಮಳೆ ಪ್ರದೇಶದಲ್ಲಿ ಇಂತಹವುಗಳನ್ನ ಬೆಳೆಯಲು ಸಾಧ್ಯವಾಗಿದ್ದೆ ವಿಶೇಷವೆಂದೇ ಹೇಳಬೇಕು.

 

ಕೆಲೆವೆಡೆ ಹನಿ ನಿರಾವರಿ ಪದ್ದತಿ, ಸ್ಪ್ರಿಂಕ್ಲರ್ ವ್ಯವಸ್ಥೆ, ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಜತೆಗೆ ಕೆಲೆವೆಡೆ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ನಂತಹ ತಂತ್ರಜ್ನಾನಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ತಂತ್ರಜ್ನಾನವನ್ನು ಉಪಯೋಗಿಸಿ ಈ ರಾಷ್ಟ್ರಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ.

 ಒಮಾನ್ ರಾಷ್ಟ್ರದ ಬೆಟ್ಟ ಗುಡ್ಡಗಾಡು ಪ್ರದೇಶಗಳ ಬುಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ಸಾವಿರಾರು ನೀರಿನ ಝರಿಗಳಿವೆ, ಈ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದ್ದು, ಮಿಕ್ಕ ಕೆಲೆವೆಡೆ ಬೋರ್ ವೆಲ್ ಗಳನ್ನು ಕೊರೆದು ಕೃಷಿಗಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ದುಬೈ ನಿಂದ ಒಮಾನ್ ರಾಷ್ಟ್ರದ ಮಸ್ಕತ್ ಗೆ ರಸ್ತೆಯಲ್ಲಿ ಪ್ರಯಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಕಿ.ಮಿ. ದೂರದಷ್ಟು ಹಚ್ಚ ಹಸಿರಿನಿನ ತೋಟಗಳನ್ನು ಕಾಣಬಹುದು, ಇದೇ ರೀತಿ ಸಲಾಲ್ಹ, ಸೂರ್, ನಿಜ್ವ ಮುಂತಾದ ಪ್ರದೇಶಗಳಲ್ಲಿಯೂ ಸಹ ಹೊಲಗದ್ದೆಗಳಿವೆ. ಸಲಾಲ್ಹ ಪ್ರದೇಶವಂತೂ ನಮ್ಮ ಸಹ್ಯಾದ್ರಿ ತಪ್ಪಲಿನ ಒಂದು ಪಟ್ಟಣದಂತೆ ಇದೆ. ರಾಜಧಾನಿ ಮಸ್ಕತ್ ಸೇರಿದಂತೆ ಇತರೆ ನಗರಗಳಾದ ಸಲಾಲ್ಹ, ಸೋಹಾರ್, ಸೂರ್ ಮುಂತಾದೆಡೆ ಮುಖ್ಯರಸ್ತೆ ಬದಿಯಲ್ಲಿರುವ ಹಚ್ಚ ಹಸಿರಿನ ಉದ್ಯಾನವನಗಳು, ಕೈತೋಟಗಳು, ಗಿಡ ಮರಗಳನ್ನು ನೋಡಿದೊಡನೆ, ಪ್ರವಾಸಿಗರಿಗೆ ಆಶ್ಚಯವಾಗುವುದು ಖಂಡಿತ. ಒಮಾನಿನ ಕೆಲೆವೆಡೆ ಮಣ್ಣು ಫಲವತ್ತಾಗಿದೆ, ಇಲ್ಲಿನ ಗಿಡ ಮರಗಳಿಗೆ ಸೂಕ್ತ ಪ್ರಮಾಣದ ನೀರನ್ನು ಪೂರೈಸಿದರೆ, ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ. ಮನೆಮುಂದಿನ ಜಾಗಗಳಲ್ಲಿ ಬಹುತೇಕ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದಲ್ಲದೆ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಾರೆ.

 

ಈ ಅರಬ್ ರಾಷ್ಟ್ರಗಳಲ್ಲಿ ತ್ಯಾಜ್ಯನೀರನ್ನ ಸಂಸ್ಕರಿಸಿ ಆ ನೀರನ್ನು ಈ ಉದ್ಯಾನವನಗಳಿಗೆ ಸರಬರಾಜು ಮಾಡಲಾಗುತ್ತದೆ. ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಪದ್ದತಿ ಮುಖಾಂತರ ಗಿಡಗಳಿಗೆ ಅಗತ್ಯವಾದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ.

 ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯುವುದರ ಜತೆಗೆ ಕೃಷಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುವುದು ಮಾತ್ರವಲ್ಲದೆ, ಕೃಷಿಯನ್ನು ಸಹ ಒಂದು ಉದ್ಯಮವನ್ನಾಗಿ ಪರಿಗಣಿಸಿ, ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯವಾದ ಸೌಕರ್ಯಗಳನ್ನು ಅರಬ್ ರಾಷ್ಟ್ರಗಳು ಕಲ್ಪಿಸಿಕೊಡುತ್ತಿವೆ.  ಕೃಷಿ ವಲಯದಲ್ಲಿ ಹೂಡಿಕೆ ಮಾಡುವ ಸಲುವಾಗಿ ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಕೃಷಿ ಉಪಕರಣಗಳ ಆಮದು ಸುಂಕ  ವಿನಾಯಿತಿ, ಕಡಿಮೆ ಬಡ್ಡಿದರದ ಸಾಲ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಕೃಷಿಯ ಜತೆಗೆ ಅತ್ಯಾಧುನಿಕ ತಂತ್ರಜ್ನಾನದ ಸುಸಜ್ಜಿತ ಹೈನುಗಾರಿಕೆ ಫಾರಂಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಸಾಕಷ್ಟಿವೆ. ಇಲ್ಲಿ ಉತ್ಪಾದನೆಯಾಗುವ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ದೇಶದೆಲ್ಲೆಡೆ ಬಳಕೆಯಾಗುವುದಲ್ಲದೆ ಇತರೆ ರಾಷ್ಟ್ರಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

 ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಜತೆಗೆ ನಾಗರೀಕರ ಅಗತ್ಯಕ್ಕೆ ತಕ್ಕಂತೆ ಬೇಕಾದ ಕುರಿ ಕೋಳಿ ಮುಂತಾದವುಗಳನ್ನ ಇಲ್ಲಿ ಬೆಳೆಸಿ  ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯಾವುದೇ ಒಂದು ರಾಷ್ಟ್ರ, ಆಹಾರದಂತಹ ವಿಷಯದಲ್ಲಿ ಬೇರೆಯವರ ಅವಲಂಬನೆಯಲ್ಲಿರುವುದು ಸರಿಯಲ್ಲ. ಈಗ ಸಾಕಷ್ಟು ಹಣ ಇದೆ ಎಂದು ಬೇಕಾದದ್ದನ್ನು ರಫ್ತು ಮಾಡಿಕೊಂಡು ಜೀವಿಸುವುದು ಸಹ ಉತ್ತಮ ನಿರ್ಧಾರವಲ್ಲ, ಮುಂದಿನ ಕನಿಷ್ಟ ಐವತ್ತು ವರ್ಷಗಳಿಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಸೂಕ್ತ ಯೋಜನೆಗಳನ್ನ ಹಾಕಿಕೊಂಡು ಮುಂದಡಿಯಿಡುವುದು ಉತ್ತಮ ಲಕ್ಷಣ. ಆ ನಿಟ್ಟಿನಲ್ಲಿ, ಅರಬ್ ರಾಷ್ಟ್ರಗಳು ಮುಂದಾಲೋಚನೆಯಿಂದ ಸ್ವಾವಲಂಬನೆಯತ್ತ ಎಚ್ಚರಿಕೆಯ ಹೆಜ್ಜೆಇಡುತ್ತಿರುವುದು ಇತರೆ ರಾಷ್ಟ್ರಗಳಿಗೆ ಒಂದು ಪಾಠ ಎಂದು ಹೇಳಬೇಕು.


ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಸುಝೋ: ಚೀನಾದ ವೆನಿಸ್

ನಾನು ಕೆಲಸ ಮಾಡುವ ಒಮಾನ್ ರಾಷ್ಟ್ರದ ಆಫೀಸಿನ ಬಿಜಿನೆಸ್ ಗೆ ಸಂಭಂದ ಪಟ್ಟಂತೆ ಒಮ್ಮೆ ಚೈನಾ ಪ್ರವಾಸಕ್ಕೆ ಹೋಗಿದ್ದೆ. ಈ ಪ್ರವಾಸದಲ್ಲಿ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ಮತ್ತು ಸುಝೋ ನಗರಗಳಲ್ಲಿ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಒಟ್ಟು ಒಂದು ವಾರದ ಕೆಲಸ. ಮಸ್ಕತ್ ಗೆ ವಾಪಾಸು ಹಿಂದಿರುಗುವ ದಿನ ನಮ್ಮ ಆಥಿತೇಯ ಕಂಪನಿಯವರು ಪ್ರಾಚೀನ ಐತಿಹಾಸಿಕ ನಗರವಾದ ಸುಝೋ ನಗರದ ಪ್ರವಾಸವನ್ನು ಆಯೋಜಿಸಿದ್ದರು. ಸುಝೋ ನಗರ ಚೀನಾದ ಅತಿ ಪುರಾತನವಾದ ಸಾಂಸ್ಕೃತಿಕ ನಗರ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ನಗರವಿದೆ. ಕ್ರಿ.ಪೂ.514ರಲ್ಲಿ ಈ ನಗರವನ್ನು ನಿರ್ಮಾಣಮಾಡಿದ್ದರು ಎಂದು ಹೇಳಲಾಗುತ್ತಿದೆ. 15ನೇ ಶತಮಾನದ ಅಂತ್ಯದಿಂದ 19 ನೇ ಶತಮಾನದವರೆಗೆ, ಸುಝೋ ನಗರ ಚೀನಾದ ಆರ್ಥಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಐತಿಹಾಸಿಕ ಪುರಾತನ ನೀರಿನ ಕಾಲುವೆಗಳು, ಕಲ್ಲಿನ ಸೇತುವೆಗಳು, ಪಗೋಡಗಳು ಮತ್ತು ಸುಂದರ  ಉದ್ಯಾನವನಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳು.


ಈ ನಗರವನ್ನು ಸಾಮಾನ್ಯವಾಗಿ "ವೆನಿಸ್ ಆಫ್ ದಿ ಈಸ್ಟ್" ಅಥವಾ "ವೆನಿಸ್ ಆಫ್ ಚೀನಾ" ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆಯುರೋಪಿನ ವೆನೀಸ್ ನಗರದಲ್ಲಿರುವಂತೆ ಇಲ್ಲಿಯೂ ಸಹ ಭಾಗಶಃ ನಗರ ನೀರಿನೊಳಗೆ ಇದೆ. ಇಲ್ಲಿನ ಕಾಲುವೆಗಳಲ್ಲಿ  ಸಂಚರಿಸಲು ದೋಣಿಗಳ ವ್ಯವಸ್ಥೆಯಿದೆ. ಕಾಲುವೆಯ ಇಕ್ಕೆಲಗಳಲ್ಲಿ ಮನೆಗಳಿವೆ,ಅಂಗಡಿಗಳಿವೆ, ಹೋಟೇಲ್ ರೆಸ್ಟಾರೆಂಟ್ ಗಳಿವೆ. ಈ ಪ್ರದೇಶದ ಸೌಂದರ್ಯವನ್ನು ಅನುಭವಿಸಲು  ದೋಣಿಯಲ್ಲಿಯೇ ಪ್ರಯಾಣಿಸಬೇಕು. ನಮ್ಮ ಪ್ರವಾಸದ ಸಮಯದಲ್ಲಿ ಈ ಕಾಲುವೆಯಲ್ಲಿ ನಾವು ಪ್ರಯಾಣಿಸುವಾಗ, ಇದರ ಕುರಿತು ಹಲವಾರು ಕುತುಹಲಕಾರಿ ವಿಷಯಗಳನ್ನು ತಿಳಿದುಕೊಂಡೆವು. ಈ ಕಾಲುವೆಗಳೆಲ್ಲ ದೊಡ್ಡದಾದ ಗ್ರ್ಯಾಂಡ್ ಕೆನಾಲ್ ಅನ್ನು ಸಂಪರ್ಕಿಸುತ್ತವೆ. ಸುಝೋ ನಗರದ ಕೆಲ ಭಾಗ ಈ ಬೃಹತ್ ನೀರಿನ ಕಾಲುವೆ ಆಕ್ರಮಿಸಿದೆ. ಈ ಕಾಲುವೆಗೆ ಸುಧೀರ್ಘವಾದ ಇತಿಹಾಸವಿದೆ. ಶತಶತಮಾನಗಳ ಹಿಂದೆ ಸುಲಭವಾಗಿ ಸರಕು ಸರಂಜಾಮುಗಳನ್ನು ಸರಬರಾಜು ಮಾಡಲು ಈ ಕಾಲುವೆಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಅಂದಿನ ರಾಜಪರಿವಾರದವರಿಗೆ ನೂರಾರು ಕಿ.ಮಿ. ದೂರದ ಊರುಗಳಿಗೆ ರಸ್ತೆ ಮೂಲಕ ಪ್ರಯಾಣದಲ್ಲಿ ಕುದುರೆ, ಎತ್ತಿನಗಾಡಿ ಮುಂತಾದವುಗಳಲ್ಲಿ ಪ್ರಯಾಣಿಸಿದರೆ ವಿಪರೀತವಾದ ಮೈ ನೋವು ಬರುತಿತ್ತು

, ಸುಸ್ತಾಗುತಿತ್ತು. ಇಂತಹ  ಧೀರ್ಘವಾದ ಪ್ರಯಾಣವನ್ನು ರಾಜಪರಿವಾರದ ಅದರಲ್ಲೂ ರಾಜ, ರಾಣಿ, ರಾಜಕುಮಾರಿ ಮತ್ತಿತರು ಕಾಲುವೆ ಮುಖಾಂತರ ಸುಲಭವಾಗಿ ಪ್ರಯಾಣ ಮಾಡಲು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಅದೇನೆ ಇರಲಿ, ಈ ಕಾಲುವೆಯ ಉಪಯೋಗದಿಂದ ಚೀನಾದ ಆರ್ಥಿಕ ಪರಿಸ್ಥಿತಿ ತುಂಬಾ ಬಲಗೊಂಡಿತ್ತು ಎಂದು ಹಲವಾರು ಕಾಲಘಟ್ಟದಲ್ಲಿ ದಾಖಲಾಗಿದೆ.

 

ಈ ಕಾಲುವೆಯ ಉದ್ದ ಸುಮಾರು 1776 km (ಕಿ.ಮಿ) ನಷ್ಟು (ಬೀಜಿಂಗ್‌ನಿಂದ ಝೆಜಿಯಾಂಗ್ ಪ್ರಾಂತ್ಯದವರೆಗೆ), ಉದ್ದವಿದೆ. ಇದು ವಿಶ್ವದ ಅತಿ ಉದ್ದದ ದೊಡ್ಡ ಕಾಲುವೆಯಾಗಿದ್ದು, ಮಾನವ ನಿರ್ಮಿತ ಕೃತಕ ನದಿಯಾಗಿದೆ. ಬೀಜಿಂಗ್‌ನಿಂದ ಪ್ರಾರಂಭಿಸಿಟಿಯಾಂಜಿನ್ ಮತ್ತು ಹೆಬೈ, ಶಾಂಡೊಂಗ್, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳ ಮೂಲಕ ಹಾಂಗ್‌ಝೌ ನಗರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲಿ ಇದನ್ನು ಮೊದಲು ಕಟ್ಟಲು ಪ್ರಾರಂಭಿಸಿದರು, ನಂತರ ಕ್ರಿ.ಶ. 581–618 ರಲ್ಲಿ ಮತ್ತು ಕ್ರಿ.ಶ. 1271–1633, ಹೀಗೆ ವಿವಿಧ ಕಾಲಘಟ್ಟದಲ್ಲಿ ಇಲ್ಲಿನ ರಾಜಮನೆತನಗಳು ಇದನ್ನು ವಿಸ್ತರಿಸುತ್ತ ಬಂದಿದ್ದಾರೆ.  ಈ ಕಾಲುವೆ  ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಈ ಕಾಲುವೆಯಲ್ಲಿ ಪ್ರಮುಖವಾಗಿ ಆಹಾರಧಾನ್ಯಗಳನ್ನು ಸಾಗಿಸಲಾಗುತಿತ್ತು. ಸೇನಾ ತುಕಡಿಗಳನ್ನು ಒಂದುಕಡೆ ಇನ್ನೊಂದು ಕಡೆಗೆ ಸಾಗಿಸಲು ಸಹ ಇದನ್ನ ಬಳಸುತಿದ್ದರು.  ಈ ಕಾಲುವೆಯಲ್ಲಿ ಸಂಚರಿಸಲು, ಅಂದಿನ ಕಾಲದಲ್ಲಿಯೇ ತಂತ್ರಜ್ನಾನವನ್ನು ಉಪಯೋಗಿಸಿ ಪ್ರಯಾಣಕ್ಕೆ ಸೂಕ್ತವಾದ ದೋಣಿಗಳನ್ನು ನಿರ್ಮಿಸುತಿದ್ದರು. ಸಾಗಾಣೆದಾರರು ಅಂದಿನ ಆಡಳಿತಗಾರರಿಗೆ, ಸುಂಕವನ್ನ ನೀಡಬೇಕಿತ್ತು. ಇದೊಂದು ಉತ್ತಮವಾದ ಆದಾಯವಾಗಿತ್ತು. ಈ ಸಾಗಾಟದ ಸಮಯದಲ್ಲಿ ದರೋಡೆಕೋರರು, ಲೂಟಿಕೋರರು ದಾಳಿಯಿಡುತಿದ್ದರಂತೆ, ಅವರಿಂದ ರಕ್ಷಿಸಲು ಅಲ್ಲಲ್ಲಿ ಸೈನಿಕರ ತುಕಡಿಗಳನ್ನ ನಿಯೋಜಿಸುತಿದ್ದರು. ಆದರೂ ಸಂಧರ್ಭ ನೋಡಿ, ಈ ದಾಳಿಕೋರರು ಆಹಾರಧಾನ್ಯಗಳು ಸೇರಿದಂತೆ ಮತ್ತಿತರ ವಸ್ತುಗಳನ್ನ ದರೋಡೆ ಮಾಡುತಿದ್ದರು.

 

ಒಂದು ಕಾಲದಲ್ಲಿ ಪ್ರತಿವರ್ಷ 8000 ಕ್ಕೂ ಹೆಚ್ಚಿನ ದೋಣಿಗಳು ಸಂಚರಿಸುತಿದ್ದ 1776 km (ಕಿ.ಮಿ) ಉದ್ದದ ಈ ಐತಿಹಾಸಿಕ ಕಾಲುವೆ ಕಾಲನ ಹೊಡೆತಕ್ಕೆ ಸಿಕ್ಕಿಇಂದು ಹಾಳಾಗಿದೆ. ಕೆಲೆವೆಡೆ ಇದರ ಗುರುತುಗಳೇ ನಾಶವಾಗಿವೆ. ಕೆಲೆವೆಡೆ ಕಾಲುವೆ ಮುಚ್ಚಿ ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ರಸ್ತೆ ರೈಲು ಮಾರ್ಗವನ್ನು ಯಥೇಚ್ಚವಾಗಿ ಉಪಯೋಗಿಸುತ್ತಿರುವುದರಿಂದ, ಎಲ್ಲೆಲ್ಲಿ ಅತಿ ಹೆಚ್ಚು ನೀರು ಇದೆಯೋ ಮತ್ತು ಸಂಪರ್ಕಯೋಗ್ಯವಿದೆಯೋ ಆ ಕಾಲುವೆ/ನದಿ ಮಾತ್ರ ಬಳಕೆಯಲ್ಲಿದೆ, ಮಿಕ್ಕಿದ್ದು ಹೂಳು ತುಂಬಿ ಮುಚ್ಚಿ ಹೋಗಿದೆ. ಕೆಲೆವೆಡೆ ಗುರುತೇ ಸಿಗದಷ್ಟು ಹಾಳಾಗಿದೆ. 12ನೇ ಶತಮಾನದ ಪ್ರಸಿದ್ದ ಪ್ರವಾಸಿಗ ಮಾರ್ಕೋಪೋಲೋ ಸೇರಿದಂತೆ ವಿವಿಧ ವಿದೇಶಿ ಪ್ರವಾಸಿಗರು ಈ ಐತಿಹಾಸಿಕ ಕಾಲುವೆ ಕುರಿತು ದಾಖಲಿಸಿದ್ದಾರೆ.

 

ಸುಝೋದಲ್ಲಿ, ಈ ಕಾಲುವೆ ಪ್ರಯಾಣದ ನಂತರ ವಿವಿಧ ಪ್ರವಾಸಿತಾಣಗಳಿಗೆ ನಮ್ಮ ಕರೆದುಕೊಂಡು ಹೋದರು. ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಈ ಎಲ್ಲಾ ಸ್ಥಳಗಳು ನೂರಾರು ವರ್ಷಗಳ ಹಿಂದೆ ಕಟ್ಟಿದಂತಹವು. ಅವುಗಳನ್ನ ಇಂದಿಗೂ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ. ಸುಝೋ ನಗರದ ಈ ಸ್ಥಳಗಳನ್ನ ನೋಡಿದೊಡನೆ, ಪುರಾತನ ಚೀನಾದ ನಗರವೊಂದನ್ನು ನೋಡಿದಂತಹ ಅನುಭವವಾಗುತ್ತದೆ.

 *ಪ್ಯಾನ್ಮೆನ್ (ಪ್ಯಾನ್ ಗೇಟ್)*. ಪ್ಯಾನ್ಮೆನ್ ಎನ್ನುವ ಈ ರಮಣೀಯ ಪ್ರದೇಶವನ್ನು ಶಾಸ್ತ್ರೀಯ ಉದ್ಯಾನಗಳ ವಾಸ್ತುಶಿಲ್ಪದ ರಚನೆಯನ್ನು ಬಳಸಿಕೊಂಡು ಕೆಲವು ಐತಿಹಾಸಿಕ ತಾಣಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ  "ಮೂರು ಸುಂದರ ದೃಶ್ಯಾವಳಿಗಳನ್ನು" ನೋಡಬಹುದು. 1) ಪನ್ಮೆನ್ ಗೇಟ್, 2) ವೂ ಮೆನ್ ಸೇತುವೆ ಮತ್ತು 3) ರುಯಿಗುವಾಂಗ್ ಪಗೋಡಾ. ಪ್ಯಾನ್ಮೆನ್ ಗೇಟ್ ಸುಝೌನಲ್ಲಿ 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ ಹೆಗ್ಗುರುತಾಗಿದೆ. ಇಂದಿಗೂ ಪ್ರಾಚೀನ ಕೋಟೆಗಳಲ್ಲಿ ಒಂದಾಗಿ ಇದು ಉಳಿದಿದೆ.  ಆಕರ್ಷಕವಾದ "ವು ಮೆನ್" ಸೇತುವೆಯು ಸುಝೌದಲ್ಲಿ ಅತಿ ಎತ್ತರವಾದ ಪುರಾತನ ಸೇತುವೆಯಾಗಿದೆ.  ಇದು ಸಾಂಗ್ ರಾಜವಂಶದ (ಕ್ರಿ.ಶ. 960-1279) ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಏಳು ಅಂತಸ್ತಿನ ಪಗೋಡವನ್ನು ಮರದ ವೇದಿಕೆಗಳೊಂದಿಗೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಿರಿದಾದ ಮೆಟ್ಟಿಲುಗಳ ಮೇಲೆ ಹತ್ತಿದ ನಂತರ, ಸುಝೋ ನಗರದ ಹೃದಯಭಾಗವನ್ನು ನೋಡಬಹುದು. ಹಚ್ಚ ಹಸಿರಿನ ಸುಂದರವಾದ ಉದ್ಯಾನವನಗಳು, ನೀರಿನ ಕಾಲುವೆಗಳು ಇತ್ಯಾದಿಗಳನ್ನ ಕಣ್ತುಂಬಿಕೊಳ್ಳಬಹುದು.

 

*ಟೈಗರ್ ಹಿಲ್:* ಟೈಗರ್ ಹಿಲ್ ಸುಝೋ ನಗರದ ಒಂದು  ಪ್ರವಾಸಿಗರ ಆಕರ್ಷಣೆಯಾಗಿದೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಇಲ್ಲಿಯೂ ಸಾಕಷ್ಟು  ಪುರಾತನ ವಾಸ್ತುಶಿಲ್ಪಗಳನ್ನು ನೋಡಬಹುದು. 2500 ವರ್ಷಗಳ ಹಿಂದೆ ಇಲ್ಲಿನ ಒಂದು ಯುದ್ದದಲ್ಲಿ ಈ ಪ್ರಾಂತ್ಯದ ರಾಜನೊಬ್ಬ  ಮರಣಹೊಂದುತ್ತಾನೆ. ಅವನ ಮಗ "ಫೂ ಚಾಯ್"ಅವನನ್ನು ಸರ್ಜಿಂಗ್ ಸೀ ಹಿಲ್‌ ಎನ್ನುವ ಈ ಪ್ರದೇಶದಲ್ಲಿ ಸಮಾಧಿ ಮಾಡುತ್ತಾನೆ. ಮೂರು ದಿನಗಳ ನಂತರ ಇಲ್ಲಿಗೆ  ಬಿಳಿ ಹುಲಿಯೊಂದು  ಬಂದಿತು ಎಂಬ ಐತಿಹ್ಯವಿದೆ. ಆದ್ದರಿಂದ ಜನರು ಅಂದಿನಿಂದ ಅದನ್ನು ಟೈಗರ್ ಹಿಲ್ ಎಂದು ಮರುನಾಮಕರಣ ಮಾಡಿದ್ದಾರೆ.

 

*ಹನ್ಶನ್ ದೇವಾಲಯ:* ಹನ್ಶನ್ ದೇವಾಲಯ, ಸುಝೌನಲ್ಲಿರುವ ಬೌದ್ಧ ದೇವಾಲಯವಾಗಿದೆ. ಲಿಯಾಂಗ್ ರಾಜವಂಶದಲ್ಲಿ (A.D. 502-557) ಮೊದಲು ನಿರ್ಮಿಸಲಾದ ದೇವಾಲಯಕ್ಕೆ ಟ್ಯಾಂಗ್ ರಾಜವಂಶದ ಕವಿ-ಸನ್ಯಾಸಿಯ ಹೆಸರನ್ನು ಇಡಲಾಗಿದೆ. ಇಲ್ಲಿ ಹಿಂದೂ ಧರ್ಮದ ಪದ್ದತಿಯಂತೆ ಮೂರ್ತಿ ಪೂಜೆಯನ್ನ ಕಾಣಬಹುದು. ಬುದ್ದನಿಗೆ ದೂಪ, ಫಲ ಪುಷ್ಫ ಇತ್ಯಾದಿಗಳನ್ನ ಅರ್ಪಿಸುತ್ತಾರೆ. ದೇವಾಲಯದ ಪ್ರಾಂಗಣ, ಗಂಟೆ, ಗರ್ಭಗುಡಿ, ಎಲ್ಲವೂ ಭಾರತದಲ್ಲಿನ ದೇವಾಲಯದಂತೆ ಚೈನೀಸ್ ಶೈಲಿಯಲ್ಲಿ ಕಟ್ಟಿರುವುದು ವಿಶೇಷ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದಾಗ, ಈ ಪುರಾತನ ದೇವಾಲಯ ಸೇರಿದಂತೆ ದೇಶದ ಎಲ್ಲಾ ದೇವಾಲಯ, ಚರ್ಚ್ ಮತ್ತು ಮಸೀದಿಗಳನ್ನ 1950 ರಿಂದ 1979ರವರೆಗೆ ಕಾಲ ಮುಚ್ಚಿದ್ದರು.

 ಸುಝೌವನ್ನು *"ಉದ್ಯಾನಗಳ ನಗರ"* ಎಂದು ಸಹ ಕರೆಯಲಾಗುತ್ತದೆ. 16ನೇ ಶತಮಾನದಲ್ಲಿ 170 ಉದ್ಯಾನಗಳು ಈ ನಗರದಲ್ಲಿವಂತೆ. ಈಗ ಅಂದಾಜು 50 ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕೆಯ ವಿಶ್ವ ಇತಿಹಾಸದಲ್ಲಿ ಶ್ರೇಷ್ಠ ಮೇರುಕೃತಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂಬತ್ತು ಉದ್ಯಾನವನಗಳನ್ನು ವಿಶ್ವ ಸಾಂಸ್ಕೃತಿಕ ಪರಂಪರೆಗಳಲ್ಲಿ ಪಟ್ಟಿ ಮಾಡಲಾಗಿದೆ. ಚೀನೀ ಉದ್ಯಾನ ಸಂಸ್ಕೃತಿಯ ಹೆಮ್ಮೆಯೆಂದು ಗುರುತಿಸಲ್ಪಡುವ  ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ ಮತ್ತು ಲಿಂಗರಿಂಗ್ ಗಾರ್ಡನ್  ಇಂದಿಗೂ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ.

 *ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್* ಅನ್ನು ಕ್ರಿ.ಶ 1509 ರಲ್ಲಿ ನಿರ್ಮಿಸಲಾಯಿತು.  ಇದು ಸುಝೋದಲ್ಲಿನ ಅತಿದೊಡ್ಡ ಶಾಸ್ತ್ರೀಯ ಸಾಂಪ್ರದಾಯಿಕ ಉದ್ಯಾನವನವಾಗಿದೆ. ಇಡೀ ಉದ್ಯಾನವು ನೀರಿನ ಕೊಳ, ಕಾಲುವೆಗಳಿಂದೆ, ಆಕರ್ಷಕ ಕಲ್ಲು ಬಂಡೆಗಳು, ಮಂಟಪಗಳು, ವಿವಿಧ ರೀತಿಯ ಸುಂದರವಾದ ಹೂವಿನ ಗಿಡಗಳು, ಆಕರ್ಷಕ ಮರಗಿಡಗಳಿಂದ ಕೂಡಿದ ಇಲ್ಲಿನ ದೃಶ್ಯಾವಳಿ ಮನಸ್ಸಿಗೆ ಮುದ ನೀಡುತ್ತವೆ. ಅಂಕುಡೊಂಕಾದ ಹಾದಿಯಲ್ಲಿ ನಡೆಯುತ್ತಾ ಮುಂದೆ ಹೋದಂತೆ , ಪ್ರತಿಯೊಂದು ಹೆಜ್ಜೆಗೂ ವಿಭಿನ್ನ ದೃಶ್ಯಾವಳಿಗಳು ಗೋಚರಿಸುತ್ತವೆ.  ರಮಣೀಯ ಮತ್ತು ಶಾಂತಿಯುತ, ಉದ್ಯಾನದಲ್ಲಿ  ಪ್ರತಿಯೊಂದು ವಸ್ತುವೂ  ಹಿಂದಿನ ಕಥೆಯನ್ನು ಹೇಳುತ್ತದೆ.

 

*ಲಿಂಗರಿಂಗ್ ಗಾರ್ಡನ್* (ಲಿಯುವಾನ್ ಗಾರ್ಡನ್) ಚೀನಾದಲ್ಲಿ ಅತಿ ದೊಡ್ಡ ಪ್ರಮಾಣದ ಕ್ಲಾಸಿಕಲ್ ಖಾಸಗಿ ಉದ್ಯಾನವಾಗಿದ್ದು, 23300 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಇದು ಕ್ವಿಂಗ್ ರಾಜವಂಶದ ಶೈಲಿಯ ವಿನ್ಯಾಸವನ್ನು ಪ್ರತಿನಿಧಿಸುತ್ತದೆ.  ಸೊಗಸಾದ ವಾಸ್ತುಶಿಲ್ಪ ಕಲೆ, ಭವ್ಯವಾದ ಸಭಾಂಗಣಗಳು ಮತ್ತು ಸುಂದರವಾದ ಗಾರ್ಡೆನ್ ಅಂಗಳಗಳಿಗೆ ಹೆಸರುವಾಸಿಯಾಗಿದೆ. ಈ ಗಾರ್ಡನ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರ್ವದಲ್ಲಿ ಮುಖ್ಯವಾಗಿ ವಾಸ್ತುಶಿಲ್ಪ, ಮಧ್ಯದಲ್ಲಿ ವಿಶಾಲವಾದ ಉದ್ಯಾನವನ, ಪಶ್ಚಿಮವು ಕಲ್ಲು ಬಂಡೆಗಳಿಂದ ಕೂಡಿದ ಮತ್ತು ಉತ್ತರಕ್ಕೆ ಗ್ರಾಮೀಣ ದೃಶ್ಯಾವಳಿಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

 

*ರೇಷ್ಮೆ ನಗರಿ:-* ಸಾವಿರಾರು ವರ್ಷಗಳಿಂದ, ಸುಝೋ ನಗರದ ಜನರು ಅದ್ಭುತವಾದ ರೇಷ್ಮೆಬಟ್ಟೆಗಳನ್ನುತಯಾರಿಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 4700 ವರ್ಷಗಳ ಹಿಂದೆ ಇಲ್ಲಿ ರೇಷ್ಮೆ ಉಪಯೋಗದಲ್ಲಿತ್ತು ಎಂದು ಉತ್ಖನನದ ವೇಳೇ ದೊರೆತ ಅವಶೇಷಗಳಿಂದ ಸಾಬೀತು ಪಡಿಸಲಾಗಿದೆ. ಹೀಗಾಗಿ ಸುಝೋ ನಗರವನ್ನು ಸಿಲ್ಕ್ ಸಿಟಿ ಎಂದು ಕರೆಯುವುದಲ್ಲದೆ ಇಲ್ಲಿ ಸಿಲ್ಕ್ ರೋಡ್ ಇತ್ತು ಎಂದು ಹೇಳಲಾಗುತ್ತಿದೆ. 1991 ರಲ್ಲಿ ನಿರ್ಮಿಸಲಾದ ಸುಝೋ ಸಿಲ್ಕ್ ಮ್ಯೂಸಿಯಂ ಚೀನಾದಲ್ಲಿ ರೇಷ್ಮೆಯ ಕುರಿತಾದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಚೀನಾದ 7000 ವರ್ಷಗಳ ರೇಷ್ಮೆ ಇತಿಹಾಸವನ್ನು ತಿಳಿದುಕೊಳ್ಳಬಹುದು, ರೇಷ್ಮೆ ಹುಳುಗಳ ಜೀವನ, ಸಾಂಪ್ರದಾಯಿಕ ರೇಷ್ಮೆ ನೇಯ್ಗೆ ಕೌಶಲ್ಯವನ್ನು ವೀಕ್ಷಿಸಬಹುದು.

 

ಹೀಗೆ ಚೀನಾದ ಪ್ರವಾಸದ ವೇಳೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ನಮಗೆ ಒದಗಿಬಂತು.  ಚೀನಾದ ಹಳೆಯ ಚಲನ ಚಿತ್ರಗಳಲ್ಲಿ ಚೈನಾದ ಸಾಂಪ್ರದಾಯಿಕ  ಊರುಗಳು, ಕಟ್ಟಡಗಳನ್ನು ನೋಡಿದ್ದ ನಮಗೆ ಪ್ರತ್ಯಕ್ಷವಾಗಿ ಸುಝೋದಲ್ಲಿ ಅಂತಹ ಸ್ಥಳಗಳನ್ನು ಕಾಣುವಂತಾಯಿತು. ಒಂದೆಡೆ ಗಗನಚುಂಬಿ ಆಧುನಿಕ ಕಟ್ಟಡಗಳು, ಮೆಟ್ರೋ ಟ್ರೈನ್, ಮೋನೋ ರೈಲ್, ಎಕ್ಸ್ಪ್ರೆಸ್ ಹೆದ್ದಾರಿ, ದೊಡ್ಡದಾದ ಫ್ಲೈ ಓವರ್ ಗಳು ಮತ್ತೊಂದೆಡೆ ಸಾಂಪ್ರದಾಯಿಕ ಶೈಲಿಯ ಪುರಾತನ ನಗರ ಜೀವನವನ್ನು ಕಣ್ತುಂಬಿಕೊಳ್ಳುವ ಅನುಭವಾಯಿತು.

 ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ