ಸ್ಪಂದನ ತಂಡದವರು ಮಸ್ಕತ್ ಕನ್ನಡಿಗರಿಗಾಗಿ ಮತ್ತೊಂದು ಸಂಗೀತ ರಸದೌತಣ ಉಣಬಡಿಸಲು ವೇದಿಕೆ ಸಿದ್ದಪಡಿಸತೊಡಗಿದ್ದಾರೆ. ಸಂಘಟಕರ ತಯಾರಿ ನೊಡಿದರೆ
ಇದೊಂದು ಕಾರ್ಯಕ್ರಮ ಅದ್ಬುತ ವಾಗಿ ರೂಪಿತಗೊಳ್ಳು ವಂತೆ ಕಾಣುತ್ತಿದೆ. ಕಳೆದ
ವರ್ಷ ನಡೆದ "ನೆನಪಿನಂಗಳ" (ಯಾದೋಂಕಿ
ಬಾರಾತ್) ಸಂಗೀತ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿತ್ತು.
ಆ ನೆನಪುಗಳು ಇಂದಿಗೂ ಸಹ ಕಾಡುತ್ತಿವೆ. ಈಗ ಮತ್ತೊಂದು
ಸಂಭ್ರಮಕ್ಕಾಗಿ ಮಸ್ಕತ್ ಕನ್ನಡಿಗರು ಕಾಯುವಂತೆ ಮಾಡಲು ಮುಂದಾಗಿರುವ ಸ್ಪಂದನ ಸಂಘಟಕರಿಗೆ ನಮ್ಮದೊಂದು
ಸಲಾಮ್.
ಇಲ್ಲಿ ಮುಖ್ಯವಾಗಿ ನಾನು ಹೇಳಬೇಕೆಂದಿರುವುದು, ಸಂಘಟಕರ ಬದ್ದತೆ,
ಇಚ್ಚಾಶಕ್ತಿ ಮತ್ತು ಸ್ಪಂದನ ಸದಸ್ಯ ರ ಸಂಪೂರ್ಣ ತೊಡಗಿಕೊಳ್ಳುವಿಕೆ ಕುರಿತು.
೨೦೧೩ ಹೊಸವರ್ಷದ ಉಡುಗೊರೆಗಾಗಿ ಮಾನವೀಯ ಮೌಲ್ಯಗಳನ್ನು ಒಳಗೊಂಡ ರಕ್ತದಾನ ಶಿಬಿರ
ಏರ್ಪಡಿಸಿ ಸುಮಾರು ೧೫೦ ಜನರಿಂದ ರಕ್ತದಾನ ಮಾಡಿಸಿದ್ದು, ಜಾತಿ ಮತ ಧರ್ಮ
ಬೇಧವಿಲ್ಲದೆ ಅತಿ ಹೆಚ್ಚು ಜನರು ಭಾಗವಹಿಸಿದ್ದು ವಿಶೇಷ ವಾಗಿತ್ತು ಅದರಲ್ಲೂ ಅತಿಹೆಚ್ಚು ಕರ್ನಾಟಕದವರೆ
ತೊಡಗಿಸಿಕೊಂಡಿದ್ದು ವಿಶೇಷ ವೆನಿಸಿತ್ತು. ಯಾವುದೇ ಅಪೇಕ್ಷೆ ಮತ್ತು ನಿರೀಕ್ಷೆ
ಯಿಲ್ಲದೆ ಸ್ಪಂದನ ಸದಸ್ಯರ ಎಲ್ಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು, ಇದಲ್ಲದೆ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಅವರ ಸಾಮಾಜಿಕ ಬದ್ಧತೆ
ಎತ್ತಿ ತೋರಿಸುತ್ತೆ. ಯಾವುದೇ ಒಂದು ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ
ತೊಡಗಿಸಿಕೊಂಡಾಗ ಮಾತ್ರ ಅದರಲ್ಲಿ ಯಶಸ್ವಿಯಾಗೋದು ಖಂಡಿತ, ಹಾಗೆಯೆ ಇಚ್ಚಾಶಕ್ತಿ
ಸಹ ಬಹುಮುಖ್ಯ. ಸ್ಪಂದನ ತಂಡದವರಲ್ಲಿ ಪ್ರಮುಖರಾದ ಶ್ರೀಯುತ ಪ್ರಕಾಶ್ ಕೋಣಿ
ನಾಯಕ್, ಕರುಣಾಕರ್ ರಾವ್ ಮತ್ತು ಇನ್ನೂ ಹಲವರ ಪಾತ್ರ ಬಹು ದೊಡ್ಡದು.
ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವ ಸಂಘದ ಸದಸ್ಯರ ಗುಣ ಮೆಚ್ಚುವಂತಹದ್ದು.
ಕಳೆದ ಬಾರಿ ಯಾದೋಂಕಿ ಬರಾತ್ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಹೊರತುಪಡಿಸಿ ಮಿಕ್ಕೆಲ್ಲ
ಕಾರ್ಯಕ್ರಮಗಳಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು. ಇದರಿಂದ ಮಸ್ಕತ್ ನಲ್ಲಿ ಎಲೆ ಮರೆ ಕಾಯಿಯಂತಿದ್ದ ಬಹುತೇಕ ಪ್ರತಿಭೆಗಳ ಪ್ರೇಕ್ಷಕರಿಗೆ
ಪರಿಚಯವಾಯಿತು. "ನೆನಪಿನಂಗಳ" (ಯಾದೋಂಕಿ ಬರಾತ್) ರಸಸಂಜೆಯ
ಯಶಸ್ಸಿನ ಗುಟ್ಟು ಏನೆಂದರೆ, ಅದೊಂದು ಕೇವಲ ಸಂಗೀತ ಕಾರ್ಯಕ್ರಮ ವಾಗಿರಲಿಲ್ಲ,
ಎಲ್ಲ ವಯೋಮಾನದವರು ಇಷ್ಟಪಡುವಂತಹ ಕಾರ್ಯಕ್ರಮ ಗಳನ್ನು ರೂಪಿಸಿದ್ದು. ಬಹುಮುಖ್ಯವಾಗಿ ಹಾಡುಗಳ ಆಯ್ಕೆ ತುಂಬಾ ಮಹತ್ವದ್ದು., ಜತೆಗೆ ಹಲವಾರು
ನೃತ್ಯ ಪ್ರದರ್ಶನ, ಯಕ್ಷಗಾನ ಮತ್ತು ಜೋಕ್ ಗಳು. ಒಂದು ಟಿವಿ ಶೋ ನಂತೆ ಒಂದರ ನಂತರ ಕಾರ್ಯಕ್ರಮಗಳು ನಡೆದಿದ್ದು, ರಾತ್ರಿ ೧೧ ಗಂಟೆಯವರೆಗೂ ಅಲ್ ಫಲಜ್ ಹೋಟೆಲ ನ ಗ್ರಾಂಡ ಸಭಾಂಗಣ ಜನ ಶಿಳ್ಳೆ ಚಪ್ಪಾಳೆಗಳೊಂಡಿಗೆ
ಜನ ಕುಪ್ಪಳಿಸಿ ಕುಣಿದಿದ್ದು "ನೆನಪಿನಂಗಳ" ಕಾರ್ಯಕ್ರಮದ ಯಶಸ್ಸಿನ ಗುಟ್ಟು ಎಂದು ಹೇಳಲಡ್ಡಿಯಿಲ್ಲ.
ಕಳೆದ ಎರಡುವರೆ ದಶಕಗಳಿಂದ ಮಸ್ಕತ್ ನಲ್ಲಿ ನೆಲೆಸಿರುವ ಶ್ರೀಯುತ ಪ್ರಕಾಶ್ ಕೋಣಿ ನಾಯಕ್ ರವರಿಗೆ
ಕನ್ನಡಿಗರ ನಾಡಿಮಿಡಿತ ಚೆನ್ನಾಗಿ ಬಲ್ಲರು, ಅದರ ತಕ್ಕಂತೆ ಸುಂದರ ಕಾರ್ಯಕ್ರಮಗಳನ್ನು
ನಡೆಸಿಕೊಡುವುದರಲ್ಲಿ ಅವರ ಪರಿಶ್ರಮ ಅಪಾರ. ಅದೂ ಅಲ್ಲದೆ ಅವರಿಗಿರುವ ಸಂಘಟನಾ
ಶಕ್ತಿ ಬಹು ದೊಡ್ಡದು, ಮಸ್ಕತ್ ನಲ್ಲಿ ಒಂದು ಕಾರ್ಯಕ್ರಮ ನಡೆಸುವುದು ಬಹು
ದೊಡ್ಡ ಸಂಗತಿ, ಸೂಕ್ತ ಪ್ರಾಯೋಜಕರ ಹುಡುಕಾಟ ಮತ್ತು ಸಭಾಂಗಣದಲ್ಲಿ ಸಾವಿರಾರು
ಪ್ರೇಕ್ಷಕರನ್ನು ಒಂದು ಕಡೆ ಕಲೆಹಾಕುವುದು ಸಾಮಾನ್ಯ ಮಾತಲ್ಲ. ಈ ಬಗ್ಗೆ
ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಇಷ್ಟು "ಒಂದು ಒಳ್ಳೆ ಕೆಲಸ
ಮಾಡುವುದಕ್ಕೆ ಒಂದು ಒಳ್ಳೆ ಮನಸ್ಸು ಮತ್ತು ಇಚ್ಚಾಶಕ್ತಿ ಇದ್ದರೆ ಯಾವ ಕೆಲಸಕ್ಕೂ ಅಡ್ತಡೆಗಳು ಮತ್ತು
ಕೊರತೆ ಕಂಡು ಬರುವುದಿಲ್ಲ. ಮಾಡಬೇಕು ಎನ್ನುವ ಮನಸ್ಸಿದ್ದರೆ ಎಲ್ಲ ತನ್ನಿಂದತಾನೆ
ನಡೆದು ಹೋಗುತ್ತೆ, ನಾನು ಮಾಡಬೇಕಾದ ಕರ್ತವ್ಯ ಯಾವುದು? ಮಾಡಿದ್ದೇನೋ, ಇಲ್ಲವೋ? ಎಂದು ಆತ್ಮಪೂರ್ವಕವಾಗಿ
ಯೋಚಿಸಿ. ಅದನ್ನು ಮಾಡಿ ಫಲವನ್ನು ಪರಮಾತ್ಮನಿಗೆ ಒಪ್ಪಿಸಿ.ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು, ಎಂದು ಮನಸ್ಸಿನ
ಸಿದ್ಧತೆ ಮಾಡಿಕೊಳ್ಳಿ.ಆಗ ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ,
ಆಸೆ ಬೆಟ್ಟದಷ್ಟು, ಕನಸು ಆಕಾಶದಷ್ಟು, ಇರಬೇಕು. ಆದರೆ, ಇರುವುದರಲ್ಲಿ ತೃಪ್ತಿ
ಇರಬೇಕು.ಏಕೆಂದರೆ,ನಾವು ಬೆಟ್ಟದಷ್ಟು ದೊಡ್ಡವರಲ್ಲ,ಆಕಾಶದಷ್ಟು ವಿಶಾಲವಲ್ಲ,ಎಂಬ ಅರಿವು ಯಾವಾಗಲೂ ಇರಬೇಕು".
ಎಂದು ಅವರು ಹೇಳಿದಾಗ ನನ್ನ ಅನುಭವಕ್ಕೆ ಬಂದಂತೆ ಈ ಮಾತುಗಳು ನಿಜಕ್ಕೂ ಸತ್ಯ ವಾದದ್ದು.
ಮೇ ೧೬ ರಂದು ಮಸ್ಕತ ಅಲ್ ಫಲಜ್ ಹೋಟೆಲ್ ನ ದಿ ಗ್ರಾಂಡ್ ಸಭಾಂಗಣದಲ್ಲಿ ನಡೆಯಲಿರುವ "ರಾಗ ಅನುರಾಗ" ರಸಸಂಜೆ ಯಶಸ್ವಿ ಯಾಗಿ
ನಡೆಯಲಿ ಎಂದು ಆಶಿಸೋಣ. ಹಾಗು ಮಸ್ಕತ್ ನಲ್ಲಿ ವಾಸಿಸುತ್ತಿರುವ ಎಲ್ಲ ಕನ್ನಡಿಗರು
ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಿಗೆ ಕಾರಣೀ ಭೂತರಾಗೋಣ.
ಪಿ.ಎಸ್.ರಂಗನಾಥ.
ಮಸ್ಕತ್ - ಒಮಾನ್.




